Advertisement

ವನಿತಾ ಟೀಮ್‌ ಬ್ಯಾಡ್ಮಿಂಟನ್‌ ಭಾರತಕ್ಕೆ ಕ್ವಾರ್ಟರ್‌ ಫೈನಲ್‌ ಆಘಾತ

06:20 AM Aug 21, 2018 | Team Udayavani |

ಜಕಾರ್ತಾ: ಏಶ್ಯನ್‌ ಗೇಮ್ಸ್‌ ವನಿತಾ ಟೀಮ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಜಪಾನ್‌ ವಿರುದ್ಧ ಎಡವಿದ ಭಾರತ ಪದಕ ರೇಸ್‌ನಿಂದ ಹೊರಬಿದ್ದಿದೆ. ಸೋಮವಾರ ನಡೆದ ಮುಖಾಮುಖೀಯಲ್ಲಿ ಜಪಾನ್‌ 3-1 ಅಂತರದಿಂದ ಭಾರತವನ್ನು ಮಣಿಸಿ ಸೆಮಿಫೈನಲ್‌ಗೆ ನೆಗೆಯಿತು.

Advertisement

ಕಳೆದ ಏಶ್ಯಾಡ್‌ನ‌ಲ್ಲಿ ಕಂಚಿನ ಪದಕ ಜಯಿಸಿದ್ದ ವನಿತಾ ತಂಡದ ಮೇಲೆ ಈ ಬಾರಿ ಇನ್ನೂ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಪಿ.ವಿ. ಸಿಂಧು ಹೊರತುಪಡಿಸಿ ಉಳಿದವರೆಲ್ಲರೂ ಸೋಲಿನ ಸುಳಿಗೆ ಸಿಲುಕಿದರು. ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ, ಕೂಟದ ಅಗ್ರ ಶ್ರೇಯಾಂಕಿತ ತಂಡವೂ ಆಗಿರುವ ಜಪಾನ್‌ ತನ್ನ ಛಾತಿಗೆ ತಕ್ಕ ಪ್ರದರ್ಶನ ನೀಡಿತು.

ಗೆದ್ದದ್ದು ಸಿಂಧು ಮಾತ್ರ
ಆರಂಭಿಕ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು 21-18, 21-19 ಅಂತರದಿಂದ ಅಕಾನೆ ಯಮಗುಚಿ ಅವರನ್ನು ಮಣಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. ಆದರೆ ಭಾರತದ ಗೆಲುವಿನ ಆಟ ಈ ಪಂದ್ಯಕ್ಕಷ್ಟೇ ಸೀಮಿತಗೊಂಡಿತು. ತಿರುಗಿ ಬಿದ್ದ ಜಪಾನ್‌ ಮುಂದಿನ ಮೂರೂ ಪಂದ್ಯಗಳಲ್ಲಿ ಗೆದ್ದು ಮುನ್ನಡೆಯಿತು.ವನಿತಾ ಡಬಲ್ಸ್‌ನಲ್ಲಿ ಎನ್‌. ಸಿಕ್ಕಿ ರೆಡ್ಡಿ-ಆರತಿ ಸುನೀಲ್‌ ಅವರನ್ನು ಯುಕಿ ಫ‌ುಕುಶಿಮಾ-ಸಯಾಕಾ ಹಿರೋಟಾ 21-15, 21-6 ಅಂತರದಿಂದ ಮಣಿಸಿದರು. ಸ್ಪರ್ಧೆ 1-1 ಸಮಬಲಕ್ಕೆ ಬಂತು.

ಸೈನಾ ನೆಹ್ವಾಲ್‌ಗೆ ಸೋಲು
ನಿರ್ಣಾಯಕ ದ್ವಿತೀಯ ಸಿಂಗಲ್ಸ್‌ನಲ್ಲಿ ನಜೋಮಿ ಒಕುಹರಾ ವಿರುದ್ಧ  ಆಡಲಿಳಿದ ಸೈನಾ ನೆಹ್ವಾಲ್‌ ಮೇಲೆ ವಿಪರೀತ ನಿರೀಕ್ಷೆ ಇತ್ತು. ಆದರೆ 3 ಗೇಮ್‌ಗಳ ಕಾದಾಟ ನಡೆಸಿದರೂ ಗೆಲುವು ಒಲಿಯಲಿಲ್ಲ. ಸೈನಾ 11-21, 25-23, 16-21 ಅಂತರದ ಸೋಲು ಕಾಣಬೇಕಾಯಿತು.

“ಮಸ್ಟ್‌ ವಿನ್‌’ ಪಂದ್ಯದಲ್ಲಿ ಪಿ.ವಿ. ಸಿಂಧು-ಅಶ್ವಿ‌ನಿ ಪೊನ್ನಪ್ಪ ಡಬಲ್ಸ್‌ ಆಡಲಿಳಿದರು. ಆದರೆ ಒಲಿಂಪಿಕ್‌ ಚಾಂಪಿಯನ್ಸ್‌ ಮಿಸಾಕಿ ಮತ್ಸುಟೊಮೊ-ಅಯಾಕಾ ತಕಹಾಶಿ ವಿರುದ್ಧ ಇವರ ಆಟ ನಡೆಯಲಿಲ್ಲ. 13-21, 12-21 ಅಂತರದ ಸೋಲುಂಡ ಸಿಂಧು-ಅಶ್ವಿ‌ನಿ ಭಾರತದ ಹೋರಾಟವನ್ನು ನಿರಾಶಾದಾಯಕವಾಗಿ ಮುಗಿಸಿದರು.

Advertisement

“ಜಪಾನ್‌ ವಿರುದ್ಧ ಮೊದಲ ಪಂದ್ಯವಾಡುವುದು ಯಾವತ್ತೂ ಅತ್ಯಂತ ಕಠಿನ ಸವಾಲು. ಗೆಲುವಿನ ಆರಂಭವನ್ನೇ ಪಡೆದೆವು. ಡಬಲ್ಸ್‌ ಆಟಗಾರ್ತಿಯರ ಪ್ರದರ್ಶನವೂ ಉತ್ತಮ ಮಟ್ಟದಲ್ಲಿತ್ತು. ಸೈನಾ ಕೂಡ ನೂರು ಪ್ರತಿಶತ ಸಾಮರ್ಥ್ಯ ತೋರಿದರು. ಆದರೆ ತಾಂತ್ರಿಕವಾಗಿ ಜಪಾನಿಯರ ಆಟ ಮೇಲ್ಮಟ್ಟದಲ್ಲಿತ್ತು’ ಎಂಬುದಾಗಿ ಸಿಂಧು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next