Advertisement

ಮನೆ, ಕಚೇರಿಯಲ್ಲೂ ಪುರುಷರಿಗಿಂತ ಸ್ತ್ರೀಯರಿಂದಲೇ ಹೆಚ್ಚು ಕೆಲಸ

09:29 PM Mar 11, 2020 | Team Udayavani |

ಮೈಸೂರು: ಎಲ್ಲಾ ಕ್ಷೇತ್ರಗಳಲ್ಲಿಯೂ ಇಂದು ಪುರುಷ ಸಮನಾಗಿ ಮಹಿಳೆಯೂ ಸಾಧನೆ ಮಾಡಬಲ್ಲೆ ಎಂದು ತೋರಿಸಿಕೊಟ್ಟಿದ್ದಾಳೆ. ಇಂತಹ ಮಹಿಳೆಗೆ ಯಾವ ದೇಶದಲ್ಲಿ ಸಮಾನ ಅವಕಾಶ ಕಲ್ಪಿಸಲಿಯೋದಿ ಆ ದೇಶ ಅಭ್ಯುದಯ ಕಾಣಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ. ಒಂಟಿಗೋಡಿ ಹೇಳಿದರು.

Advertisement

ನ‌ಗರದ ಮಹಾರಾಣಿ ಮಹಿಳಾ ಕಲಾ ಕಾಲೇಜು, ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ ಹಿರಿಯ ವಿಧ್ಯಾರ್ಥಿನಿಯರ ಸಂಘ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಆಶ್ರಯದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಹಿಂದೆ ವಕೀಲ ವೃತ್ತಿಯಲ್ಲಿ ಮಹಿಳೆಯರೇ ಇರುತ್ತಿರಲಿಲ್ಲ, ಇಂದು ಪುರುಷರನ್ನು ಮೀರಿಸುವಷ್ಟು ಮಹಿಳಾ ವಕೀಲೆಯರು ಇದ್ದಾರೆ. ಅದೇ ರೀತಿ ಪೊಲೀಸ್‌ ಇಲಾಖೆಯಲ್ಲೂ ಇದ್ದಾರೆ. ಹೀಗೆ ಹಂತ ಹಂತವಾಗಿ ಯಾವುದನ್ನು ಪುರುಷ ಪ್ರಧಾನ ಕೆಲಸಗಳು ಎನ್ನುತ್ತಿದ್ದರೋ ಅಲ್ಲೆಲ್ಲಾ ಮಹಿಳೆಯರು ನಾವೂ ಕೂಡ ಸಮನಾಗಿ ಕೆಲಸ ಮಾಡಬಲ್ಲೆವು ಎಂದು ತೋರಿಸಿಕೊಡುತ್ತಿದ್ದಾರೆ. ಅಲ್ಲದೇ ಮನೆಯಲ್ಲೂ ಹೋಗಿ ಮನೆ ಕೆಲಸ ಮಾಡುವ ಮೂಲಕ ಪುರುಷರಿಗಿಂತ ಮಹಿಳೆ ಹೆಚ್ಚಿನ ಸಾಧನೆ ಮಾಡುವುದು ನಮಗೆಲ್ಲಾ ತಿಳಿದಿದೆ ಎಂದರು.

ಮಹಿಳೆಯರನ್ನು ನಮ್ಮ ಅಕ್ಕ ತಂಗಿಯರಂತೆ, ತಾಯಿಯಂತೆ ಕಾಣುವ ಭಾವನೆ ಬೆಳೆಸಿಕೊಳ್ಳಬೇಕು. ಯಾವ ದೇಶದಲ್ಲಿ ಮಹಿಳೆಗೆ ಗೌರವ ಕೊಡುವ ಸಂಸ್ಕೃತಿ ಬರುತ್ತದೋ ಆ ದೇಶದಲ್ಲಿ ಮಹಿಳಾ ದೌರ್ಜನ್ಯಗಳು ನಡೆಯುವುದಿಲ್ಲ, ಅದಕ್ಕಾಗಿ ಮೊದಲು ಪುರುಷರ ದೃಷ್ಟಿಕೋನ ಬದಲಾಗಬೇಕು. ಈ ನಿಟ್ಟಿನಲ್ಲಿ ಮಹಿಳೆಯರನ್ನು ಸಮಾನಾಗಿ ಕಾಣಿ, ಅತ್ಯಂತ ಗೌರವದಿಂದ ನೋಡಿ ಎಂದು ತಿಳಿಸಿದರು.

ಯಾರನ್ನೂ ಅವಲಂಬಿಸಬೇಡಿ: ಮಹಿಳೆಯರು ಯಾರನ್ನೂ ಅವಲಂಬಿಸಬಾರದು. ಉತ್ತಮ ಶಿಕ್ಷಣ ಪಡೆದು ಸ್ವಂತ ಶಕ್ತಿಯಿಂದ ತನ್ನ ಕಾಲ ಮೇಲೆ ನಿಲ್ಲುವಂತಾಗಬೇಕು. ಆಗ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥಸಿಗುತ್ತದೆ. ನೀವು ಒಬ್ಬರನ್ನು ಅವಲಂಬಿಸಿದರೆ, ಅಲ್ಲೇ ತುಳಿತಕ್ಕೆ ಒಳಗಾಗುತ್ತೀರಿ ಎಂದರು. ಕಾರ್ಯಕ್ರಮದಲ್ಲಿ ನಾಗರತ್ನ, ಮಹಾದೇವಿ, ಆರ್‌.ಬನ್ನಮ್ಮ, ಬನ್ನೇರಮ್ಮ ಎಂಬ ನಾಲ್ಕು ಮಂದಿ ಮಹಿಳಾ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಜೊತೆಗೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

Advertisement

ಈ ವೇಳೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಪಿ.ವಿ.ಸ್ನೇಹಾ, ಮೈಸೂರು ವಕೀಲರ ಸಂಘದ ಆಧ್ಯಕ್ಷ‌ ಎಸ್‌.ಆನಂದ್‌ ಕುಮಾರ್‌, ಪ್ರಾಂಶುಪಾಲ ಡಾ.ಟಿ.ವಿಜಯ್‌, ಪ್ರಾಧ್ಯಾಪಕಿ ಮನೋನ್ಮಣಿ, ಸಂಗೀತ ಶಿಕ್ಷಕ ಶೂಭಾ ರಘವೇಂದ್ರ, ಗಾಯಕಿ ಮಹಿಮಾ ಕಶ್ಯಪ್‌ ಇದ್ದರು.

ಮಹಿಳೆಗೆ ಉಚಿತ ಕಾನೂನು ಸೇವೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಯಾವುದೇ ಮಹಿಳೆಯಾದರೂ ಉಚಿತ ಕಾನೂನು ಸೇವೆ ಇರಲಿದೆ. ಮಹಿಳೆಯರಿಗೆ ಯಾವುದೇ ಕೇಸ್‌ಗಳಿದ್ದಲ್ಲಿ ಕೂಡಲೇ ಪ್ರಾಧಿಕಾರಕ್ಕೆ ಬಂದು ವಕೀಲರನ್ನು ಸಂಪರ್ಕಿಸಿದರೆ, ನಿಮ್ಮ ಪ್ರಕರಣದ ಸಂಪೂರ್ಣ ವೆಚ್ಚವನ್ನು ಪ್ರಾಧಿಕಾರವೇ ಭರಿಸಲಿದೆ.

ಇಂತಹ ಕಾನೂನು ನೆರವನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಪಿ.ದೇವಮಾನೆ ತಿಳಿಸಿದರು. ಮಹಿಳೆಯರನ್ನು ಬಲಿತೆಗೆದುಕೊಳ್ಳುತ್ತಿರುವ ಕ್ಷೇತ್ರವೇ ಮೂಢನಂಬಿಕೆ. ಮೊದಲು ಇದನ್ನು ಬಿಡಿ, ಮೂಢನಂಬಿಕೆಯಿಂದ ಮಹಿಳೆಯರ ಸಮಾನತೆ, ಅಭ್ಯುದಯ ಆಗಲ್ಲ, ನೀವು ಶ್ರಮವಹಿಸಿ ದುಡಿದರೆ ನಿಮ್ಮ ಏಳ್ಗೆ ಕಾಣಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next