ಹುಣಸೂರು: ಮಹಿಳೆಯರು ಹೆಚ್ಚಿನ ಉದ್ಯೋಗ ಗಿಟ್ಟಿಸುವ ಜೊತೆಗೆ ಎಲ್ಲಾ ಕ್ಷೇತ್ರಗಳಿಗೂ ದಾಪುಗಾಲಿಡಬೇಕು. ಇದು ವಿದ್ಯಾರ್ಥಿ ದಿಸೆಯಿಂದಲೇ ಆಗುವುದು ಒಳಿತು ಎಂದು ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಇಂದಿರಾ ಸಲಹೆ ನೀಡಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಮೈಸೂರು ವಿವಿಯ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಎನ್‌ಎಸ್‌ಎಸ್ ಸುವರ್ಣ ಸಂಭ್ರಮ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶೇಷ ಉಪನ್ಯಾಸದಲ್ಲಿ “ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ’ ವಿಷಯದ ಕುರಿತು ಅವರು ಮಾತನಾಡಿದರು.
ದೊಡ್ಡ ಹೊಡೆತ: ಹೆಣ್ಣುಮಕ್ಕಳು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ಉದ್ಯೋಗಸ್ಥರಾಗುವ ಹಂತದಲ್ಲಿ ಮಹಿಳೆಯರ ಪ್ರಮಾಣ ತೀರ ಕಡಿಮೆಯಿದೆ. ಹೀಗಾಗಿ ಮಹಿಳೆಯರ ಸಬಲೀಕರಣಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮಹಿಳೆಯರು ಶಿಕ್ಷಣ ಹೊಂದಿದರೂ ಕಡೆಗೆ ಮದುವೆ, ಮಕ್ಕಳು, ಸಂಸಾರವೇ ಅಂತಿಮವೆನ್ನುವಂತೆ ಉದ್ಯೋಗಸ್ಥರಾಗುವುದನ್ನು ಕಡೆಗಣಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತಿತರ ಸಂಸ್ಥೆಗಳ ಮೂಲಕ ಮಹಿಳಾ ಸ್ವಸಹಾಯ ಸಂಘಗಳು ಅಸ್ತಿತ್ವಕ್ಕೆ ಬಂದ ನಂತರ ಮಹಿಳೆಯರಲ್ಲಿ ಉಳಿತಾಯ ಮಹತ್ವ, ಸ್ವ ಉದ್ಯೋಗ, ನಾಯಕತ್ವ ಬೆಳವಣಿಗೆ, ಪ್ರಶ್ನಿಸುವ, ಆರ್ಥಿಕ ಸ್ವಾವಲಂಬನೆ ಮೂಲಕ ಸಬಲೀಕರಣದ ಜೊತೆಗೆ ಹೋರಾಟದ ಮನೋಭಾವ ಬೆಳೆದಿದೆ. ಆದರೂ ಸಹ ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆಯಾಗಿದ್ದು, ಯುವಪಡೆ ಇದನ್ನು ಮೆಟ್ಟಿ ಮುಂದೆ ಬರಬೇಕೆಂದು ಕಿವಿಮಾತು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸುರೇಶ್, ಸ್ವಸಹಾಯ ಸಂಘಗಳ ಸ್ಥಾಪನೆ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಗಣ್ಯರು ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜ್ಞಾನಪ್ರಕಾಶ್, ದೇವರಾಜ ಅರಸು ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಎನ್‌ಎಸ್‌ಎಸ್ ಘಟಕದ ಸಂಚಾಲಕ ಡಾ.ಕೆ.ಎಸ್.ಭಾಸ್ಕರ್, ಅಧ್ಯಾಪಕ ಡಾ.ಆನಂದ್, ಐಕ್ಯೂಎಸಿ ಸಂಚಾಲಕ ದೀಪುಕುಮಾರ್, ಧರ್ಮಸ್ಥಳ ಯೋಜನೆಯ ರಾಣಿ ಸೇರಿದಂತೆ ನಗರದ ಜ್ಞಾನಧಾರ ಕಾಲೇಜು, ಅರಸು ಕಾಲೇಜು, ಹನಗೋಡು ಪ್ರಥಮದರ್ಜೆ ಕಾಲೇಜು, ಸರಗೂರು, ಎಚ್.ಡಿ.ಕೋಟೆ, ಕೆ.ಆರ್.ನಗರ, ಬೆಟ್ಟದಪುರ, ಕೊಪ್ಪ, ಸಾಲಿಗ್ರಾಮ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎನ್ನೆಸ್ಸೆಸ್‌ಗೆ 50 ವರ್ಷ: 50 ಕಾರ್ಯಕ್ರಮ: ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್ ಮಾತನಾಡಿ, ಎನ್‌ಎಸ್‌ಎಸ್ ಆರಂಭವಾಗಿ 50 ವರ್ಷ ಸಂದ ಹಿನ್ನೆಲೆಯಲ್ಲಿ 50 ಕಾರ್ಯಕ್ರಮ ರೂಪಿಸಲಾಗಿದ್ದು, ಎಲ್ಲಾ ಕಾಲೇಜುಗಳಲ್ಲೂ ಸಹ ವಿಭಿನ್ನ ರೀತಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಜಾಗೃತಿಗೊಳಿಸಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರಿಗೆ ರಾಜಕೀಯ ಸಬಲೀಕರಣ ಸಿಕ್ಕಿದೆ. ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದಿಂದ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತಾಗಬೇಕಿದೆ. ಅಭಿವೃದ್ಧಿ ಎನ್ನುವುದು ಕೇವಲ ಒಂದು ಕೈನಿಂದ ಅಥವಾ ಒಂದು ಸಮುದಾಯದಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರನ್ನೊಳಗೊಂಡ ಜವಾಬ್ದಾರಿಯುತ ನಡೆಯೇ ಸರ್ವರ ಅಭಿವೃದ್ಧಿಗೆ ಪೂರಕ ಮತ್ತು ಪ್ರೇರಕ ಎಂದರು.