ಬೆಂಗಳೂರು: ರಾಜಧಾನಿಯಲ್ಲಿ ತಡರಾತ್ರಿ ಕೆಲಸ ಮುಗಿಸಿಕೊಂಡು ಹೋಗುವ ಉದ್ಯೋಗಸ್ಥ ಮಹಿಳೆರಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಪುಂಡಪೋಕರಿಗಳಿ ಕಿರುಕುಳ ನೀಡುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಹೀಗಾಗಿ, ಅಸಭ್ಯವರ್ತನೆಗಳಿಂದ ಬೇಸತ್ತ ಮಹಿಳೆಯರು ಹಾಗೂ ಮಕ್ಕಳಿಗೆ ಸುರಕ್ಷತೆ ಒದಗಿಸಲು ನಗರ ಪೊಲೀಸ್ ಇಲಾಖೆ ಹೊಸ ಕ್ರಮ ಕೈಗೊಂಡಿದೆ.
ಈ ನಿಟ್ಟಿನಲ್ಲಿ ಮಹಿಳಾ ಪೊಲೀಸ್ ಸಿಬ್ಬದಿಯೇ ಇರುವ ಪಿಂಕ್ ಹೊಯ್ಸಳ ವಾಹನಗಳು ಬೆಂಗಳೂರಿನ ರೋಡಿಗಿಳಿಯಲಿವೆ. ವಿಶೇಷವಾಗಿ ಮಾರ್ಚ್ 8ರ ಮಹಿಳಾ ದಿನಾಚಾರಣೆಯಂದೇ 50 ಪಿಂಕ್ ಹೊಯ್ಸಳಗಸ್ತು ವಾಹನಗಳಿಗೆ ಚಾಲನೆ ದೊರೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ನಗರದ ಪ್ರತಿ ಡಿಸಿಪಿ ವಿಭಾಗದಲ್ಲಿ 3 ಅಥವಾ 4 ಪಿಂಕ್ ಹೊಯ್ಸಳ ವಾಹನಗಳು ಗಸ್ತು ತಿರುಗಲಿವೆ.
ಕಂಟ್ರೋಲ್ ರೂಂನಿಂದ ಬರುವ ಮೆಸೇಜ್ ಆಧರಿಸಿ ಸಂಕಷ್ಟದಲ್ಲಿರುವ ಮಹಿಳೆಯರ ಸ್ಥಳಕ್ಕೆ ಕ್ಷಣಾರ್ಧದಲ್ಲಿ ಧಾವಿಸಲಿವೆ. ಪ್ರತಿ ವಾಹನದಲ್ಲಿ ಓರ್ವ ಮಹಿಳಾ ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದಾರೆ. ಹೈಟೆಕ್ ಹೊಯ್ಸಳ ಮಾದರಿಯಲ್ಲಿಯೇ ಈ ವಾಹನಗಳು ಕಾರ್ಯನಿರ್ವಹಣೆ ಮಾಡಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ನಗರದಲ್ಲಿ ಮಹಿಳೆಯರಿಗೆ ಅಸುರಕ್ಷಿತ ಎನಿಸುವ ಜನನಿಬಿಡ ಪ್ರದೇಶಗಳು, ಹಾಸ್ಟೆಲ್‌ಗಳು, ವಸತಿ ಸಮುತ್ಛಯಗಳು, ಶಾಪಿಂಗ್ ಮಾಲ್‌ಗಳು ಸೇರಿದಂತೆ ಪ್ರಮುಖ 50 ಸ್ಥಳಗಳಲ್ಲಿ ಪಿಂಕ್ ಹೊಯ್ಸಳ ವಾಹನಗಳ ನಿಲುಗಡೆ ಮಾಡಲು ಸ್ಥಳ ಗುರುತಿಸಲಾಗಿದೆ.ಅಲ್ಲದೆ ನಿಗದಿಪಡಿಸಿದ ಸ್ಥಳದ ಸುತ್ತಮುತ್ತಲ ಪ್ರದೇಶಗಳಲ್ಲಿ ಗಸ್ತು ತಿರುಗಲಿವೆ.
ಪ್ರತಿ ವಾಹನಕ್ಕೂ ಜಿಪಿಎಸ್ ತಂತ್ರಜ್ಞಾನವೂ ಅಳವಡಿಸುವ ಚಿಂತನೆಯಿದೆ. ಹೊಯ್ಸಳ ವಾಹನಗಳ ಜತೆ ಪಿಂಕ್ ಹೊಯ್ಸಳ ಕಾರ್ಯನಿರ್ವಹಣೆಯೂ ಆರಂಭವಾದರೆ ಮಹಿಳೆಯರಿಗೆ ಮತ್ತಷ್ಟು ಭದ್ರತಾ ಮನೋಭಾವ ಮೂಡಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.
ಸ್ನೇಹ ಸಂವಾದ ಅವಕಾಶ
ಕಾಲೇಜು ವಿದ್ಯಾರ್ಥಿಗಳು ಖಾಸಗಿ ಕಂಪೆನಿ ಉದ್ಯೋಗಿಗಳು ಹೆಚ್ಚಿರುವ ಸ್ಥಳಗಳಿಗೆ ತೆರಳುವ ಪಿಂಕ್‌ಹೊಯ್ಸಳ ಸಿಬ್ಬಂದಿ ಅವರ ಜತೆ ಸೌಹಾರ್ದಯುತ ಮಾತುಕತೆಯೂ ನಡೆಸಲು ಸೂಚಿಸಲಾಗಿದೆ. ಪುಂಡಪೋಕರಿಗಳ ಹಾವಳಿಯ ಎಲ್ಲಿ ಹೆಚ್ಚಿದೆ ಎಂಬ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಲಾಗುತ್ತದೆ. ಮಹಿಳಾ ಸಿಬ್ಬಂದಿಯೇ ಕರ್ತವ್ಯದಲ್ಲಿರುವುದರಿಂದ ಯಾವುದೇ ಹಿಂಜರಿಕೆಯಿಲ್ಲದೆ ಸಮಸ್ಯೆ ಹೇಳಿಕೊಳ್ಳಬಹುದು.