ಶಿಡ್ಲಘಟ್ಟ: ಮಹಿಳೆಯರು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿ.ಮುನಿಯಪ್ಪ ಸಲಹೆ ನೀಡಿದರು.
ನಗರದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಯಾಸ್ಮಿàನ್ ತಾಜ್ ಅವರನ್ನು ಅಭಿನಂದಿಸಿ ರಾಜ್ಯಾಧ್ಯಕ್ಷರು ನೀಡಿರುವ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಪಕ್ಷ ಮೊದಲಿಂದಲೂ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶ ಕಲ್ಪಿಸುತ್ತಾ ಬಂದಿದೆ. ಸ್ಥಳೀಯ ಸಂಸ್ಥೆಗಳಾದ ಜಿಪಂ, ತಾಪಂ, ಗ್ರಾಪಂ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಯಲ್ಲಿ ಅವಕಾಶ ಕಲ್ಪಿಸುವ ಜೊತೆಗೆ ಅಧಿಕಾರ ಸಹ ಒದಗಿಸಿದೆ ಎಂದರು.
ಬಡ್ಡಿರಹಿತ ಸಾಲ ಸೌಲಭ್ಯ: ಮಹಿಳೆಯರು ಮೊದಲು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸ್ತ್ರೀಶಕ್ತಿ ಸಂಘಗಳನ್ನು ರಚಿಸಲಾಯಿತು. ಸ್ವಸಹಾಯ ಸಂಘಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಡಿಸಿಸಿ ಬ್ಯಾಂಕ್ ಮೂಲಕ ಬಡ್ಡಿರಹಿತ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಕ್ಷೇತ್ರದಲ್ಲಿ ಮಹಿಳಾ ಕಾಂಗ್ರೇಸ್ ನಗರ ಘಟದ ಅಧ್ಯಕ್ಷೆಯಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿದ ಯಾಸ್ಮಿàನ್ ತಾಜ್ ಅವರ ಸೇವೆಯನ್ನು ಪಕ್ಷ ಗುರುತಿಸಿ ರಾಜ್ಯಮಟ್ಟದಲ್ಲಿ ಕಾರ್ಯದರ್ಶಿ ಸ್ಥಾನ ನೀಡಿದೆ. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಸಹ ಭಾಗವಹಿಸಿ ನೊಂದವರಿಗೆ ನ್ಯಾಯ ಒದಗಿಸಬೇಕು. ಕ್ಷೇತ್ರದಲ್ಲಿ ಮಹಿಳಾ ಕಾಂಗ್ರೆಸ್ ಘಟಕವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಾಸಕರ ಸಹಕಾರ: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಯಾಸ್ಮಿನ್ ತಾಜ್ ಮಾತನಾಡಿ, ಶಾಸಕ ವಿ.ಮುನಿಯಪ್ಪ ಅವರ ಸಹಕಾರದಿಂದ ಜಿಲ್ಲೆಯಲ್ಲಿ ಶಕ್ತಿ ನೊಂದಣಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಸಮಾಜದಲ್ಲಿರುವ ಪ್ರತಿಯೊಬ್ಬ ಬಡವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ಸಹಕಾರ ನೀಡುವ ಜೊತೆಗೆ ಮಾರ್ಗದರ್ಶನ ನೀಡಿದ್ದ ಫಲದಿಂದಾಗಿ ರಾಜ್ಯ ಮಟ್ಟದಲ್ಲಿ ಕಾರ್ಯದರ್ಶಿ ಸ್ಥಾನ ಲಭಿಸಿದೆ ಎಂದರು.
ಮುಖಂಡರಾದ ಮೊಹಮದ್ ಹಫೀಜ್, ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ಅಧ್ಯಕ್ಷ ಅಮ್ಜದ್ ನವಾಜ್, ನಗರಸಭಾ ನಾಮನಿರ್ದೇಶಿತ ಸದಸ್ಯ ಅಬ್ದುಲ್ ಗಫೂರ್, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಇಮಿ¤ಯಾಜ್ ಉಪಸ್ಥಿತರಿದ್ದರು.