ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಕುರಿತು ಮತ್ತೂಂದು ಹೊಸ ಹೆಜ್ಜೆ ಇಟ್ಟಿರುವ ನಗರ ಪೊಲೀಸ್ ಇಲಾಖೆ ಒಂದೆ ಸೂರಿನಡಿ ಸಮಗ್ರ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೆ ತರಲು ನೀಲನಕ್ಷೆ ಸಿದ್ಧಪಡಿಸಿದೆ. ನಗರ ಪೊಲೀಸ್ ಆಯುಕ್ತರ ಕಚೇರಿ ಪಕ್ಕದಲ್ಲಿಯೇ ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು “ಸೇಫ್ ಸಿಟಿ ಯೋಜನೆ’ ಅಡಿಯಲ್ಲಿ ನೂತನ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇನ್ಮುಂದೆ ಲೈಂಗಿಕ, ಕೌಟುಂಬಿಕ ದೌರ್ಜನ್ಯ ಹಾಗೂ ಇತರೆ ಪ್ರಕರಣಗಳ ಸಂತ್ರಸ್ತೆಗೆ ಆಶ್ರಯ ನೀಡುವುದರ ಜತೆಗೆ, ಕಾನೂನು ಸಲಹೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಿದೆ.
ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಈಗಾಗಲೇ ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಕುರಿತು “ಬರೋಸಾ ಸೆಂಟರ್’ ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿ ಯಲ್ಲಿ ನಗರದಲ್ಲೂ ಯೋಜನೆ ಜಾರಿಗೆ ತರಲಾಗುತ್ತಿದೆ. ನಗರದಲ್ಲಿ ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಮಹಿಳಾ ಸಾಂತ್ವನ ಕೇಂದ್ರವೊಂದು ಇದ್ದು, ಜತೆಗೆ ಸಖೀ-ಒನ್ ಸ್ಟಾಪ್ ಸೆಂಟರ್ ಯೋಜನೆಯಲ್ಲಿ ಮಹಿಳೆಯರಿಗೆ ಸಮಗ್ರ ಸೌಲಭ್ಯ ನೀಡುವ ಯೋಜನೆ ಇದೆ. ಆದರೆ, ಸದ್ಯ ಇದು ಸಕ್ರಿಯವಾಗಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಮೆಜೆಸ್ಟಿಕ್‌ನಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಂತ್ರಸ್ತೆಯರಿಗೆ ಆಶ್ರಯ ವ್ಯವಸ್ಥೆ ಕಲ್ಪಿಸಲಾಗಿದೆ.
ಹೀಗಾಗಿ, ನಗರ ಪೊಲೀಸ್ ಇಲಾಖೆಯೇ ತಮ್ಮ ಸುಪರ್ದಿಯಲ್ಲಿಯೇ ಯೋಜನೆಯನ್ನು ರೂಪಿಸಿದ್ದು, ಕೇಂದ್ರದಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳ ಜತೆಗೆ ಇಲ್ಲಿಯೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿ ಪಕ್ಕದಲ್ಲೇ ಹೊಸ ಕಟ್ಟಡ ನಿರ್ಮಿಸು ತ್ತಿರುವುದರಿಂದ ನಗರ ಪೊಲೀಸ್ ಆಯುಕ್ತರ ಅಧೀನದಲ್ಲಿಯೇ ಇಡೀ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಈ ಕಟ್ಟಡದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳಿಗಾಗಿ ವೈದ್ಯಕೀಯ ಚಿಕಿತ್ಸೆ ಮತ್ತು ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ ಸೇರಿ ವಿವಿಧ ಸೌಲಭ್ಯ ಇರಲಿದೆ.
ಇದನ್ನೂ ಓದಿ : ಹಿಜಾಬ್ ವಿವಾದ, ಬೆಳಗಾವಿಯಲ್ಲಿ ಹೈಡ್ರಾಮಾ ; ಆರು ಮಂದಿ ಯುವಕರು ಪೊಲೀಸರ ವಶಕ್ಕೆ
ಜತೆಗೆ ಪೊಕ್ಸೋ ಹಾಗೂ ಇತರೆ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ ಇಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರು ಪಡಿಸಬಹುದು. ಸದ್ಯ ಸಂತ್ರಸ್ತೆ ಮಹಿಳೆ ಅಥವಾ ಯುವತಿಯನ್ನು ವಿಚಾರಣೆಗಾಗಿ ನಗರದ ಕೆಲ ಠಾಣೆಗಳಲ್ಲಿ ಅಥವಾ ಆಡುಗೋಡಿ ತಾಂತ್ರಿಕ ಕೇಂದ್ರದಲ್ಲಿ ನಡೆಸಲಾಗುತ್ತಿದೆ. ನೂತನ ಕಟ್ಟಡ ನಿರ್ಮಾಣವಾದರೆ ಸೆಕ್ಷನ್ 164 ಅಡಿ ಹೇಳಿಕೆ ದಾಖಲು, ಪೊಲೀಸ್ ವಿಚಾರಣೆಗೂ ಸಹಾಯವಾಗಲಿದೆ. ಹೇಳಿಕೆಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್‌ಗೆ ಬೇಕಾದ ತಂತ್ರಜ್ಞಾನ ಕೂಡ ಇರಲಿದೆ.
ಉದ್ಯೋಗದ ಭರವಸೆ?
ಸಮಗ್ರ ಸೌಲಭ್ಯ ಕೇಂದ್ರದ ಸಿಬ್ಬಂದಿ ಕೆಲ ಸ್ವಯಂ ಸೇವಾ ಸಂಸ್ಥೆಗಳ ಜತೆ ಸಂಪರ್ಕ ಹೊಂದಿರುತ್ತಾರೆ. ಹೀಗಾಗಿ ಸಂತ್ರಸ್ತೆಯ ಭವಿಷ್ಯಕ್ಕೆ ನೆರವಾಗಲು ಆಕೆಗೆ ಸ್ವಯಂ ಉದ್ಯೋಗ ಅಥವಾ ಕಂಪನಿಗಳಲ್ಲಿ ಉದ್ಯೋಗಗಳ ಮಾಹಿತಿ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹಿಳೆ ಮತ್ತು ಮಕ್ಕಳ ಸಂರಕ್ಷಣೆ ಕುರಿತು ಸೇಫ್ ಸಿಟಿ ಯೋಜನೆಯಲ್ಲಿ ನೂತನ ಕಟ್ಟಡ ನಿರ್ಮಿಸುತ್ತಿದ್ದು, ಒಂದೆ ಸೂರಿನಡಿ ಅವರಿಗೆ ಅಗತ್ಯವಿರುವ ಸಮಗ್ರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
– ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ.