ಚಿಕ್ಕಮಗಳೂರು: ಮಗಳ ಅನುಮಾನಾಸ್ಪದ ಸಾವಿನ ನ್ಯಾಯಕ್ಕಾಗಿ ಕುಟುಂಬವೊಂದು ಎಸ್ಪಿ ಕಚೇರಿಯ ಮುಂದೆ ಕಣ್ಣೀರಿಟ್ಟು ಗೋಳಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕಡೂರು ನಗರದಲ್ಲಿ 31 ವರ್ಷದ ರುಕ್ಮಿಣಿ ಅನುಮಾನಸ್ಪದ ಸಾವನ್ನಪ್ಪಿದ್ದರು. ಆದರೆ ಕಡೂರು ಪೊಲೀಸರು ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮಂಡ್ಯದಿಂದ ಬಂದ ರುಕ್ಮಿಣಿ ಕುಟುಂಬಸ್ಥರು ಎಸ್ ಪಿ ಕಚೇರಿ ಎದುರು ಗೋಳಾಟ ನಡೆಸಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆ ರಾಗಿ ಮುದ್ದನಹಳ್ಳಿ ಮೂಲದ ರುಕ್ಮಿಣಿ ಅವರನ್ನು ಕಳೆದ 14 ವರ್ಷಗಳ ಹಿಂದೆ ಕಡೂರಿನ ಕಣ್ಣನ್ ಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಆದಾಗಿನಿಂದಲೂ ಅತ್ತೆ, ಮಾವ, ಗಂಡನಿಂದ ಕಿರುಕುಳ ನೀಡುವ ಆರೋಪವಿತ್ತು. ರವಿವಾರ ಮಧ್ಯಾಹ್ನ 12 ಗಂಟೆಗೆ ರುಕ್ಮಿಣಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ನನಗೆ ಮಹಾಘಟಬಂಧನದ ಆಹ್ವಾನವೂ ಇಲ್ಲ, ಎನ್.ಡಿ.ಎ ಆಹ್ವಾನವೂ ಇಲ್ಲ: ಎಚ್.ಡಿ ಕುಮಾರಸ್ವಾಮಿ
ಗಂಡ ಕಣ್ಣನ್ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಆದರೆ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ರುಕ್ಮಿಣಿ ಸಾವಿನ ಬಳಿಕ ಇಬ್ಬರು ಮಕ್ಕಳು ಕಣ್ಮರೆಯಾಗಿದ್ದು, ಮಕ್ಕಳನ್ನು ಹುಡುಕಿಕೊಟ್ಟು, ಸಾವಿನ ನ್ಯಾಯಕ್ಕಾಗಿ ಕುಟುಂಬಿಕರು ಒತ್ತಾಯಿಸುತ್ತಿದ್ದಾರೆ.
ರುಕ್ಮಿಣಿ ಸಾವಿನ ನಂತರ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಣ್ಣನ್ ಆಡಿಯೋ ಲಭ್ಯವಾಗಿದ್ದು, ತಮಗೆ ನ್ಯಾಯ ಕೊಡಿಸಬೇಕು ಎಂದು ಎಸ್ ಪಿ ಕಚೇರಿಯ ಮುಂದೆ ಅಂಗಲಾಚುತ್ತಿದ್ದಾರೆ.