Advertisement
ರೂಡಿಬೆನ್ ಆದ ಆ ಕ್ಷಣ…
Related Articles
Advertisement
ಮೌನ ಕ್ರಾಂತಿಕಾರಿ ಎಂದೇ ಹೆಸರಾದ ಗುಜರಾತಿನ ಇಳಾ ಭಟ್ ಅಸಂಘಟಿತ ವಲಯದ ಸ್ವಉದ್ಯೋಗಿ ಮಹಿಳೆಯರ ಸಂಘಟನೆ, “ಸೇವಾ’, ಸಂಸ್ಥೆಯನ್ನು ಆರಂಭಿಸಿದ್ದು, 1972ರಲ್ಲಿ. ನಗರದ ಅಸಂಘಟಿತ ವಲಯದ ಮಹಿಳೆಯರೊಂದಿಗೆ ಕೆಲಸ ಮಾಡುತ್ತಿದ್ದ “ಸೇವಾ’ಎಂಬತ್ತರ ದಶಕದಲ್ಲಿ ಗ್ರಾಮೀಣ ಭಾಗಕ್ಕೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿತ್ತು. ತೊಂಬತ್ತರ ದಶಕದ ಕೊನೆಯಲ್ಲಿ “ಸೇವಾ’ದ ಗ್ರಾಮೀಣ ಸದಸ್ಯರ ಸಂಖ್ಯೆ ಮೂರು ಲಕ್ಷದ ಸಮೀಪವಿತ್ತು. ಕೃಷಿ, ಹೈನುಗಾರಿಕೆ, ತಿನ್ನುವ ಅಂಟಿನಂತಹ ಅರಣ್ಯ ಉತ್ಪನ್ನಗಳು ಇತ್ಯಾದಿಗಳಿಗೆ ಸೂಕ್ತ ಮಾರುಕಟ್ಟೆಯ ಕೊರತೆಯಿರುವುದನ್ನು ಮನಗಂಡ “ಸೇವಾ’ ಸಂಸ್ಥೆಯು ಗ್ರಾಮೀಣ ಉತ್ಪಾದಕ ಗುಂಪುಗಳಿಗೆ ಮಾರುಕಟ್ಟೆ ಸಂಬಂಧಿತ ಸೇವೆಗಳನ್ನು ನೀಡುವುದಕ್ಕಾಗಿ “ಸೇವಾ ಗ್ರಾಮ ಮಹಿಳಾ ಹಾತ್’ ಅನ್ನು ಒಂದು ಅಪೆಕ್ಸ್ ಅಂಗವಾಗಿ ಆರಂಭಿಸಿತು. ಇದರ ಮೂಲಕ ಸಣ್ಣ ಮತ್ತು ಮಧ್ಯಮ ಹಿಡುವಳಿಯ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುವಂತಾಯಿತು.
ಸ್ವಾವಲಂಬನೆಯ ಬದುಕು
ಈಗ ಗುಜರಾತಿನ ಒಂಬತ್ತು ಜಿಲ್ಲೆಗಳಲ್ಲಿ ರೂಡಿ ಉತ್ಪಾದನಾ ಕೇಂದ್ರಗಳು ಇವೆ. 15,000 ಮಹಿಳಾ ಸಣ್ಣ ಮತ್ತು ಮಧ್ಯಮ ಹಿಡುವಳಿ ರೈತರು ಇದರ ಸದಸ್ಯರು. ಒಂದರ್ಥದಲ್ಲಿ ಇವರೇ ಕಂಪನಿಯ ಮಾಲೀಕರು ಮತ್ತು ನಿರ್ವಹಣೆ ಮಾಡುವವರು. ಸುಮಾರು 1500 “ರೂಡಿಬೆನ್’ (ರೂಡಿ ಅಕ್ಕ) ಸ್ವತಂತ್ರ ಉದ್ದಿಮೆದಾರರ ಹಾಗೆ ಕೆಲಸ ಮಾಡುತ್ತಾರೆ. ಇದರಿಂದ ರೂಡಿ ಸಂಸ್ಕರಣಾ ಕೇಂದ್ರಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಿಗೂ ನಿಯಮಿತವಾದ ಆದಾಯ ಸಿಕ್ಕಂತಾಗಿದೆ. ಮನೆಯಿಂದ ಎಂದೂ ಹೊರಗೆ ಕಾಲಿಡದಿದ್ದವರು ಈಗ ಸ್ವಾವಲಂಬಿಗಳಾಗಿ, ಲಕ್ಷಗಟ್ಟಲೆ ದುಡ್ಡಿನ ವಹಿವಾಟನ್ನು ಆತ್ಮವಿಶ್ವಾಸದಿಂದ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಅರವಳ್ಳಿ ಜಿಲ್ಲಾ ಸಂಯೋಜನಾಧಿಕಾರಿ ನೈಮಿಷಾ ಜೋಶಿ ವಿವರಿಸುತ್ತಾರೆ.
ಈ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ದಕ್ಕುವ ಜೊತೆಗೆ ಡಿಜಿಟಲ್ ಸ್ವಾತಂತ್ರ್ಯವೂ ದಕ್ಕಿದೆ. ಗುಜರಾತಿನ ಹಲವು ಜಿಲ್ಲೆಗಳಲ್ಲಿ ಈಗ ನೂರಾರು ರೂಡಿ ಬೆನ್ ಇದ್ದಾರೆ. ಮೊದಲು ಮೊಬೈಲ್ ಬಿಡಿ, ಲ್ಯಾಂಡ್ ಲೈನ್ ಫೋನ್ ಕೂಡ ಬಳಸಿದವರಲ್ಲ ನಾವು. ಈಗ ಸ್ಮಾರ್ಟ್ ಫೋನ್ ಬಳಸ್ತೇವೆ. ಮೊಬೈಲಿನಲ್ಲಿ ರೂಡಿ ಆಪ್ ಮೂಲಕ ಆರ್ಡರ್ ತಗೊಳ್ಳೋದು, ಪೇಮೆಂಟ್ ಮಾಡೋದು, ಬ್ಯಾಂಕ್ ವ್ಯವಹಾರ ಎಲ್ಲವೂ ಬೆರಳಿನ ತುದಿಯಲ್ಲೇ ಕರಗತವಾಗಿದೆ, ಎಂದು ಮೊಬೈಲನ್ನು ತೋರಿಸುತ್ತ ಹೇಳುವ ಮೀನಾ ಪ್ರಜಾಪತಿಯ ಮುಖದಲ್ಲಿ ಹೆಮ್ಮೆಯ ನಗು ಮಿನುಗುತ್ತದೆ.
ರೂಡಿ ಎಂದರೆ…:
ರೂಡಿ ಎಂದರೆ ಗುಜರಾತಿ ಭಾಷೆಯಲ್ಲಿ ಸುಂದರ ಎಂಬರ್ಥವೂ ಇದೆ. “ಸೇವಾ’ ಅಹ್ಮದಾಬಾದಿನ ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಸಂಘಟಿಸುವ ಕೆಲಸ ಆರಂಭಿಸಿದಾಗ, ರೂಡಿ ಎಂಬ ಮಹಿಳೆ ಮೊದಲ ಸದಸ್ಯಳಾಗಿದ್ದಳು. ಆಕೆಯ ಹೆಸರಿನ ನೆನಪಿಗಾಗಿಯೂ ಕಂಪನಿಗೆ ರೂಡಿ ಎಂಬ ಹೆಸರನ್ನಿಡಲು ಯೋಚಿಸಿದೆವು. ರೂರಲ್ ಡಿಸ್ಟ್ರಿಬ್ಯೂಶನ್ ನೆಟ್‌ವರ್ಕ್ ಎಂಬುದರ ಸಂಕ್ಷಿಪ್ತರೂಪವೂ ರೂಡಿ ಎಂದಾಗುತ್ತದೆ. ಗ್ರಾಮೀಣ ಭಾಗದವರಿಗೆ ಪೌಷ್ಟಿಕ ಆಹಾರ ಭದ್ರತೆ ಒದಗಿಸುವ ಜೊತೆಗೆ ಗ್ರಾಮೀಣ ಸಮುದಾಯಕ್ಕೆ ಆದಾಯ ಸುರಕ್ಷತೆ ಒದಗಿಸುವುದು ರೂಡಿಯ ಧ್ಯೇಯವಾಗಿದೆ ಎನ್ನುತ್ತಾರೆ ರೂಡಿ ಮಲ್ಟಿಟ್ರೇಡಿಂಗ್ ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾಗಿರುವ ಸುನಿತಾ ಪಟೇಲ್.
-ಸುಮಂಗಲಾ