Advertisement

ನಿ. ಸಿಜೆಐ ಗೊಗೋಯ್‌ ವಿರುದ್ಧ ಆರೋಪ ಮಾಡಿದ್ದ ಮಹಿಳೆಗೆ ಸಿಕ್ಕಿತು ಸುಪ್ರೀಂ ಕೆಲಸ

09:58 AM Jan 24, 2020 | Hari Prasad |

ಹೊಸದಿಲ್ಲಿ: ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದ ಮಹಿಳೆಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಕರ್ತವ್ಯಕ್ಕೆ ಸೇರಿ ರಜೆಯ ಮೇಲೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇದರ ಜತೆಗೆ ಅವರಿಗೆ ಇದುವರೆಗೆ ಸಿಗಬೇಕಾಗಿದ್ದ ಎಲ್ಲ ಪಾವತಿಗಳನ್ನೂ ಮಾಡಲಾಗಿದೆ.

Advertisement

2014ರ ಮೇನಲ್ಲಿ ಅವರು ಸುಪ್ರೀಂಕೋರ್ಟ್‌ಗೆ ಉದ್ಯೋಗಕ್ಕೆ ಸೇರಿದ್ದರು. 2018ರ ಅಕ್ಟೋಬರ್‌ನಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೊಗೋಯ್‌ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು. ಈ ಬೆಳವಣಿಗೆಯ ಅನಂತರ ಅವರನ್ನು ವರ್ಗಾಯಿಸಲಾಗಿತ್ತು ಮತ್ತು ಒಂದು ಹಂತದಲ್ಲಿ ವಜಾ ಮಾಡಲಾಯಿತು.

ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ, ನ್ಯಾ.ಇಂದು ಮಲ್ಹೋತ್ರಾ, ನ್ಯಾ.ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿತ್ತು. ನ್ಯಾ| ಗೊಗೋಯ್‌ ಕಳಂಕ ರಹಿತರು ಎಂದು ವರದಿ ನೀಡಲಾಗಿತ್ತು. ಜತೆಗೆ ನ್ಯಾ| ಗಗೋಯ್‌ ವಿರುದ್ಧದ ಆರೋಪ ಆಧಾರ ರಹಿತ ಎಂದು ಹೇಳಿತ್ತು.

ಇದರ ಜತೆಗೆ ದಿಲ್ಲಿ ಪೊಲೀಸ್‌ ಇಲಾಖೆಯಲ್ಲಿದ್ದ ಮಹಿಳೆಯ ಪತಿ, ಭಾವ ಅವರನ್ನು ಇದೇ ಪ್ರಕರಣದ ನೆಪದಲ್ಲಿ ವಜಾ ಮಾಡಲಾಗಿತ್ತು ಎಂದು ದೂರಿದ್ದರು. ಅನಂತರ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. 2019ರ ಮಾರ್ಚ್‌ನಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಕೆಲಸ ತೆಗೆಸಿಕೊಡುವ ವಾಗ್ಧಾನದ ಮೇಲೆ ಮಹಿಳೆ ವ್ಯಕ್ತಿಯಿಂದ ದುಡ್ಡು ಪಡೆದುಕೊಂಡಿದ್ದರು ಎಂಬ ಆರೋಪವನ್ನೂ ಹೊರಿಸಲಾಗಿತ್ತು. ಅನಂತರ ದಿಲ್ಲಿ ಪೊಲೀಸರು ಪ್ರಕರಣ ಪರಿಸಮಾಪ್ತಿ ವರದಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next