Advertisement

ಲಾಕ್‌ಡೌನ್‌ ಬಳಿಕ ಮಹಿಳಾ ದೌರ್ಜನ್ಯ ಪ್ರಕರಣ ಬೆಳಕಿಗೆ

11:03 AM Aug 03, 2020 | Suhan S |

ತುಮಕೂರು: ಲಾಕ್‌ಡೌನ್‌ ನಂತರ ಸಮಾಜದಲ್ಲಿ ಮಹಿಳಾ ದೌರ್ಜನ್ಯಗಳು ಒಂದೊಂದಾಗಿ ಹೊರ ಬರುತ್ತಿದ್ದು, ಇಂಥ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಆರಂಭಿಕ ಹಂತದಲ್ಲಿಯೇ ಪರಿಹರಿಸುವ ಕೆಲಸವಾಗಬೇಕು ಎಂದು ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಸಲಹೆ ನೀಡಿದರು.

Advertisement

ತುಮಕೂರು ನಗರ ಸಾಂತ್ವನ ಕೇಂದ್ರದಲ್ಲಿ ಸ್ನಾತಕೋತ್ತರ ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳೊಂದಿಗೆ ಹಮ್ಮಿ ಕೊಂಡಿದ್ದ ಕೋವಿಡ್‌ ಸಂಕಷ್ಟದ ಸಮಾಲೋಚನಾ ಸಭೆ ಹಾಗೂ ಕ್ಷೇತ್ರ ಕಾರ್ಯ ಪೂರೈಕೆಯ ದೃಢೀಕರಣ ಪತ್ರ ವಿತರಿಸಿ ಮಾತನಾಡಿದರು. ಮಹಿಳೆಯರ ಮೇಲಿನ ದೌರ್ಜನ್ಯ ಗಳು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಕಂಡು ಬರುತ್ತಿವೆ.

ಕೋವಿಡ್ ಸಂಕಷ್ಟದಲ್ಲಿ ಈ ದೌರ್ಜನ್ಯ ಮಹಿಳೆಯರ ಪಾಲಿಗೆ ಮತ್ತೂಂದು ಸವಾಲಾಗಿ ಪರಿಣಮಿಸಿದ್ದು, ಅತ್ಯಂತ ಎಚ್ಚರಿಕೆಯಿಂದ ಈ ಸವಾಲು ನಿಭಾಯಿಸ ಬೇಕಿದೆ. ಇಂಥ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತರು, ಸಮಾಜ ಸೇವಾ ಪ್ರಶಿಕ್ಷಣಾರ್ಥಿಗಳ ಸೇವಾ ಕಾರ್ಯ ಹೆಚ್ಚಿನದಾಗಿದ್ದು, ದೌರ್ಜನ್ಯ ನಿಯಂತ್ರಿಸಲು ಶ್ರಮಿಸಬೇಕಾಗಿದೆ ಎಂದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಯಾರೂ ಹೊರಗೆ ಬರಲು ಸಾಧ್ಯವಾಗಲಿಲ್ಲ. ಕೆಲವೊಮ್ಮೆ ದೌರ್ಜನ್ಯಗಳು ನಡೆದರೂ ಮಹಿಳೆಯರು ಸಹಿಸಿಕೊಂಡಿದ್ದರು. ಲಾಕ್‌ಡೌನ್‌ ಮುಗಿದ ನಂತರ ಸಾಂತ್ವನ ಕೇಂದ್ರಗಳಿಗೆ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಅವಧಿಯಲ್ಲಿ ಸಾಂತ್ವನ ಕೇಂದ್ರವು ಮಹಿಳೆಯರೊಂದಿಗೆ ನಿರಂತರ ದೂರವಾಣಿ ಸಂಪರ್ಕದ ಮೂಲಕವೆ ಮಾತನಾಡಿಸಿ, ಎಷ್ಟೋ ಪ್ರಕರಣಗಳನ್ನು ಸಮಾಲೋಚನೆಯ ಮೂಲಕ ಇತ್ಯರ್ಥಪಡಿಸಲಾಗಿದೆ. ಇದಕ್ಕೆ ಕುಟುಂಬದ ಹಿರಿಯರು, ಸ್ನೇಹಿತರು ಹಾಗೂ ಮುಖಂಡರನ್ನು ಬಳಸಿಕೊಳ್ಳಲಾಗಿದೆ ಎಂದರು.

ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಕಂಡು ಬಂದರೆ ಅಂತಹ ಪ್ರಕರಣಗಳಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆ ತಿಳಿಯಾಗುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಪ್ರಶಿಕ್ಷಣಾರ್ಥಿಗಳ ಮೇಲೆಯೂ ಇದೆ. ಅಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಮೇಲೆಯೂ ಇದೆ. ಇದನ್ನು ಅರ್ಥ ಮಾಡಿಕೊಂಡು ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗಬೇಕಿದೆ ಎಂದು ತಿಳಿಸಿದರು.

Advertisement

ಸಮಾಜ ಕಾರ್ಯಕರ್ತೆ ಪಾರ್ವತಮ್ಮ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ಸಂವಾದದಲ್ಲಿ ಭಾಗವಹಿಸಿ ಆನ್‌ಲೈನ್‌ ಮೂಲಕ, ದೂರವಾಣಿ ಮೂಲಕ ಪರಿಹಾರ ಸೂಚಿಸುವುದು ಹೇಗೆ ಎಂಬ ಮಾಹಿತಿಯನ್ನು ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next