ಇದು ಬೆಳಗಾವಿಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಪ್ರಕರಣ ಮತ್ತು ಅದರ ತನಿಖಾ ವಿಧಾನದ ಬಗ್ಗೆ ರಾಜ್ಯ ಹೈಕೋರ್ಟ್ ಮಮ್ಮಲ ಮರುಗಿದ ರೀತಿ.
Advertisement
ಘಟನೆ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಮತ್ತು ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ, “ನಾವು ಮೂಕರಾಗಿದ್ದೇವೆ. ನಾವು ಏನು ಹೇಳಬಹುದು? ನಾವು ನಮ್ಮನ್ನು ಮನುಷ್ಯರು ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. 21ನೇ ಶತಮಾನದಲ್ಲಿ ಮುಂದುವರಿಯುವುದರ ಬದಲು ಮತ್ತೆ 16ನೇ ಶತಮಾನಕ್ಕೆ ಹಿಂದಿರುಗಿದಂತೆ ಇದು. ಇದು ನಮಗೆಲ್ಲರಿಗೂ ನಾಚಿಕೆಗೇಡಿನ ಘಟನೆ’ ಎಂದು ದುಃಖ ವ್ಯಕ್ತಪಡಿಸಿತು.
ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ ಮುಂದಿನ ಸೋಮವಾರ, ಡಿ. 18ರಂದು ಹೆಚ್ಚುವರಿ ಸ್ಥಿತಿಗತಿ ವರದಿ ಸಲ್ಲಿಸಬೇಕು. ಅಂದಿನ ವಿಚಾರಣೆಯ ಸಂದರ್ಭದಲ್ಲಿ ಬೆಳಗಾವಿಯ ಪೊಲೀಸ್ ಆಯುಕ್ತ ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತರು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಸರಕಾರಕ್ಕೆ ತಾಕೀತು ಮಾಡಿದೆ. ಹಾಗೆಯೇ ಸಂತ್ರಸ್ತೆಗೆ ಸಂತ್ರಸ್ತರ ಪರಿಹಾರ ಯೋಜನೆಯಡಿ ನೆರವು ನೀಡಲು ಪರಿಶೀಲಿಸುವಂತೆಯೂ ಸೂಚಿಸಿತು. ಇದೊಂದು ಅಸಾಮಾನ್ಯ ಪ್ರಕರಣ, ನ್ಯಾಯಾಲಯ ಇದನ್ನು ಅಸಾಮಾನ್ಯ ರೀತಿಯಲ್ಲಿಯೇ ನಿರ್ವಹಣೆ ನಡೆಸಲಿದೆ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.ಸಂತ್ರಸ್ತೆಯ ಪುತ್ರ ತನ್ನದೇ ಸಮುದಾಯದ ಯುವತಿಯೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ತತ್‌ಕ್ಷಣ ಪೊಲೀಸರು ಸಂತ್ರಸ್ತೆಯ ನೆರವಿಗೆ ಏಕೆ ಧಾವಿಸಲಿಲ್ಲ? ಇಂಥ ಘಟನೆ ನಡೆಯುವುದಕ್ಕೆ ಅವಕಾಶ ಸಿಕ್ಕಿದ್ದಾದರೂ ಹೇಗೆ? ಪೊಲೀಸರ ಕೆಲಸ ತನಿಖೆ ಮಾಡುವುದಷ್ಟೇ ಅಲ್ಲ, ಘಟನೆಯನ್ನು ತಡೆಯುವುದೂ ಆಗಿದೆ. ಸ್ಥಳೀಯ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪೀಠವು ಸರಕಾರವನ್ನು ಪ್ರಶ್ನಿಸಿತು.
Related Articles
Advertisement