Advertisement

ಕೇರಳ: ಇನ್ನೊಂದು “ನಿಷೇಧಿತ’ಸ್ಥಳಕ್ಕೆ ಮಹಿಳೆ ಲಗ್ಗೆ​​​​​​​

12:30 AM Jan 15, 2019 | Team Udayavani |

ತಿರುವನಂತಪುರ: ಶತಮಾನಗಳಷ್ಟು ಹಳೆಯ ಆದಿವಾಸಿ ಸಂಪ್ರದಾಯ ದಂತೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದ್ದ ಕೇರಳದ ಎರಡನೇ ಅತ್ಯುನ್ನತ ಶಿಖರ ಅಗಸ್ತ್ಯರ್‌ಕೂಡಂಗೆ ಮಹಿಳೆಯೊಬ್ಬರು ಚಾರಣ ಆರಂಭಿಸಿದ್ದಾರೆ. 

Advertisement

ಶಬರಿಮಲೆಗೆ ಈಚೆಗೆ ಋತುಮತಿ ವಯಸ್ಸಿನ ಮೂವರು ಮಹಿಳೆಯರು ಪ್ರವೇಶಿಸಿದ ಬಳಿಕ ಪುರುಷರಿಗೆ ಮಾತ್ರ ಪ್ರವೇಶವಿರುವ ಸ್ಥಳವೊಂದಕ್ಕೆ ಮಹಿಳೆ ಯರು ಲಗ್ಗೆಯಿಡುತ್ತಿರುವ ಇನ್ನೊಂದು ದೃಷ್ಟಾಂತ ಇದಾಗಿದೆ.

ತಿರುವನಂತಪುರದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಒ) ಆಗಿರುವ ಧನ್ಯಾ ಸನಲ್‌ ಅವರು ಚಾರಣ ಹೊರಟಿರುವ ಮಹಿಳೆ. ನಿಷೇಧವನ್ನು ರದ್ದುಗೊಳಿಸಿ ರಾಜ್ಯ ಹೈಕೋರ್ಟ್‌ ಈಚೆಗೆ ನೀಡಿದ ತೀರ್ಪಿನ ಪ್ರತಿಯನ್ನು ಹಿಡಿದು ಅವರು ಸೋಮವಾರ ಬೋನಕಾಡ್‌ನಿಂದ ಪುರುಷ ಚಾರಣಿಗರೊಂದಿಗೆ ಕಠಿನ ಚಾರಣವನ್ನು ಆರಂಭಿಸಿದ್ದಾರೆ. ನೆಯ್ನಾರ್‌ ವನ್ಯಜೀವಿಧಾಮದಲ್ಲಿರುವ ಅಗಸ್ತ್ಯರ್‌ಕೂಡಂಗೆ ಹೊರಟಿರುವ 100 ಮಂದಿ ಚಾರಣಿಗರ ತಂಡದಲ್ಲಿರುವ ಏಕೈಕ ಮಹಿಳೆ ಧನ್ಯಾ.

ಈ ವರ್ಷ ಅಗಸ್ತ್ಯರ್‌ಕೂಡಂಗೆ ಚಾರಣ ತೆರಳುವುದಕ್ಕೆ 100 ಮಹಿಳೆಯರ ಸಹಿತ ಒಟ್ಟು 4,700 ಮಂದಿ ನೋಂದಾ ಯಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಮಹಿಳೆಯರು ಶಿಖರಕ್ಕೆ ಚಾರಣ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಚಾರಣ ಸಂಘಟಿಸುತ್ತಿರುವ ಕೇರಳ ಅರಣ್ಯ ಇಲಾಖೆ ಹೇಳಿದೆ. ಮಹಿಳೆಯರ ಪ್ರವೇಶಕ್ಕೆ ಕೆಲ ವಲಯಗಳಿಂದ ವಿರೋಧ ವ್ಯಕ್ತವಾಗಿತ್ತು.

ಆದಿವಾಸಿಗಳ‌ ಪ್ರತಿಭಟನೆ
ಶಿಖರದ ತಪ್ಪಲಲ್ಲಿ ವಾಸವಿರುವ ಕಾಣಿ ಆದಿವಾಸಿಗಳು ಧನ್ಯಾ ಅವರು ಅಗಸ್ತ್ಯರ್‌ಕೂಡಂಗೆ ಚಾರಣ ಕೈಗೊಂಡಿರುವುದನ್ನು ವಿರೋಧಿಸಿ ಚಾರಣ ಆರಂಭವಾಗುವ ಬೋನಕಾಡ್‌ನ‌ಲ್ಲಿ ಪ್ರತಿಭಟನೆ ನಡೆಸಿದರು. ಮಹಿಳೆಯರನ್ನೊಳಗೊಂಡಂತೆ 100ಕ್ಕೂ ಅಧಿಕ ಆದಿವಾಸಿಗಳು ಜಾನಪದ ಹಾಡುಗಳನ್ನು ಹಾಡಿ ವಿಶಿಷ್ಟವಾಗಿ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಆದರೆ ಕೋರ್ಟು ಆದೇಶವಿರುವುದರಿಂದ ಚಾರಣಕ್ಕೆ ತಡೆಯೊಡ್ಡುವುದಕ್ಕೆ ಹೋಗಲಿಲ್ಲ.

Advertisement

ಆದಿವಾಸಿಗಳು ಹೇಳುವುದೇನು?
ಪರ್ವತ ವಲಯ ಹಿಂದೂ ಸಪ್ತರ್ಷಿಗಳಲ್ಲಿ  ಓರ್ವರಾದ ಅಗಸ್ತ್ಯ ಮುನಿಯ ಪವಿತ್ರ ವಾಸಸ್ಥಾನವಾಗಿತ್ತೆಂದು ಕಾಣಿ ಆದಿವಾಸಿಗಳು ಹೇಳು ತ್ತಾರೆ. ಅಲ್ಲಿ ಅಗಸ್ತ್ಯರ ವಿಗ್ರಹವಿದ್ದು ಶಿಖರಕ್ಕೆ ತೆರಳುವುದಕ್ಕೆ ಮಹಿಳೆಯರಿಗೆ ಪರಂಪರಾಗತವಾಗಿ ಅವಕಾಶ ಇಲ್ಲವೆಂಬುದು ಅವರ ವಾದವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next