ಬೆಂಗಳೂರು: “ಆ ಮನೆಯಲ್ಲಿ ಗುರುವಾರ ಬೆಳಗ್ಗೆ ದಟ್ಟ ಹೊಗೆ ಆವರಿಸಿತ್ತು. ಜತೆಗೆ ಕೀರಲು ದನಿ ಚೀರಾಟ ಕೇಳಿಸುತಿತ್ತು. ಅನುಮಾನಗೊಂಡ ಸ್ಥಳೀಯರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಕಂಡಿದ್ದು, ಸುಟ್ಟು ಕರಕಲಾಗಿದ್ದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳ ಶವಗಳು!
ಹಲವು ತಿಂಗಳುಗಳಿಂದ ಬಾಧಿಸುತ್ತಿದ್ದ ಮೂರ್ಛೆ ರೋಗದಿಂದ ಬೇಸತ್ತ ತಾಯಿ, ತನ್ನ ಇಬ್ಬರು ಮಕ್ಕಳೊಂದಿಗೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಚ್‌ಎಎಲ್ ಸಮೀಪದ ಸಂಜಯ್ ನಗರದಲ್ಲಿ ಜರುಗಿದೆ. ತಮಿಳುನಾಡು ಮೂಲದ ರಾಮಲಕ್ಷ್ಮಿ(32), ಇವರ ಮಗ ಜಸ್ವಂತ್ (8) ಮತ್ತು ಮಗಳು ಹಾಸಿನಿ (2) ಮೃತರು.
ಪತ್ನಿ ರಾಮಲಕ್ಷ್ಮಿಹಾಗೂ ಮಕ್ಕಳೊಂದಿಗೆ ನೆಲೆಸಿದ್ದ ಮಹೇಂದ್ರನ್, ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸಂಜಯ್‌ನಗರದಲ್ಲಿರುವ ಪೋಷಕರ ಮನೆಗೆ ಪತ್ನಿ ಹಾಗೂ ಮಕ್ಕಳನ್ನು ಕರೆತಂದಿದ್ದರು. ಗುರುವಾರ ಬೆಳಗ್ಗೆ ಎಂದಿನಂತೆ ಮಹೇಂದ್ರನ್ ಹಾಗೂ ಅವರ ತಂದೆ ಕೂಲಿ ಕೆಲಸಕ್ಕೆ ತೆರಳಿದ್ದು, ಅವರ ತಾಯಿ ಕೂಡ ಹೌಸ್‌ಕೀಪಿಂಗ್ ಕೆಲಸಕ್ಕೆ ಹೋಗಿದ್ದರು. ಇತ್ತ ಮನೆಯಲ್ಲಿ ಮಕ್ಕಳೊಂದಿಗಿದ್ದ ರಾಮಲಕ್ಷ್ಮಿ, ಮಗ ಜಸ್ವಂತ್‌ನನ್ನು ಶಾಲೆಗೆ ಕಳಿಸದೆ ಉಳಿಸಿಕೊಂಡಿದ್ದಳು.
ಬೆಳಗ್ಗೆ 9.15ರ ಸುಮಾರಿಗೆ ಮನೆಯ ಕಿಟಕಿ ಮತ್ತು ಬಾಗಿಲು ಲಾಕ್ ಮಾಡಿದ ರಾಮಲಕ್ಷ್ಮಿ, ಇಬ್ಬರು ಮಕ್ಕಳ ಜತೆ ತಾನೂ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಮೂವರ ಆಕ್ರಂದನ ಹೊರಗೆ ಕೇಳಿ ಬಂದಿಲ್ಲ. ಆದರೆ, ಮನೆ ಒಳಗೆ ದಟ್ಟ ಹೊಗೆ ತುಂಬಿಕೊಂಡು ಕೆಲ ಹೊತ್ತಿನ ನಂತರ ಹೊರಗೆ ವಾಸನೆ ಬರಲು ಆರಂಭಿಸಿದೆ.
ಅನುಮಾನಗೊಂಡ ನೆರೆಹೊರೆಯವರು ಮನೆ ಬಳಿ ತೆರಳಿ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಂದಿಲ್ಲ. ಕೂಡಲೇ ಬಾಗಿಲು ಮೀಟಿ ಒಳಹೋದಾಗ ಮೂವರ ಶವಗಳು ಸುಟ್ಟು ಹೋದ ಸ್ಥಿತಿಯಲ್ಲಿದ್ದವು. ಕೂಡಲೇ ಸ್ಥಳೀಯರು ಪೊಲೀಸರು, ಮಹೇಂದ್ರನ್ ಹಾಗೂ ಅವರ ಅತ್ತೆ- ಮಾವನಿಗೆ ಮಾಹಿತಿ ನೀಡಿದ್ದಾರೆ.
ಮೂರ್ಛೆ ರೋಗ ಹೊಂದಿದ್ದ ರಾಮಲಕ್ಷ್ಮೀ, ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು. ಅವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದ ಮಹೇಂದ್ರನ್, ಇತ್ತೀಚೆಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದನೆ ಎಂದು ಪೊಲೀಸರು ತಿಳಿಸಿದರು. ಪ್ರಕರಣದ ಬಗ್ಗೆ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.