ಪಿರಿಯಾಪಟ್ಟಣ: ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಮಹಿಳೆಯನ್ನು ವೈದ್ಯರು ಪರೀಕ್ಷಿಸಿದಾಗ ಆಕೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟು ಬಳಿಕ ಆ ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಹುಣಸೂರು ತಾಲೂಕಿನ ವದ್ಲಿ ಮನುಗನ ಹಳ್ಳಿ ಗ್ರಾಮದ 66 ವರ್ಷದ ಮಹಿಳೆ ಈ ರೀತಿಯಾಗಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರಾಗಿದ್ದಾರೆ.
ಉಸಿರಾಟದ ತೊಂದರೆ, ರಕ್ತದೊತ್ತಡ, ಮಧುಮೇಹ ಮತ್ತು ಹೈಪೋಥೈರಾಯ್ಡಿನಿಂದ ಬಳಲುತ್ತಿದ್ದ ಈ ಮಹಿಳೆಗೆ ಸೋಮವಾರ ಸಾಯಂಕಾಲ ಜ್ವರ ಹಾಗೂ ಕೆಮ್ಮಿನ ಸಮಸ್ಯೆ ವಿಪರೀತವಾದ ಸಂದರ್ಭದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು.
ಇಲ್ಲಿ ವೈದ್ಯರು ಪರೀಕ್ಷಿಸಿದಾಗ ಮಹಿಳೆ ಕೋವಿಡ್ 19 ವೈರಸ್ ಸೋಂಕಿನಿಂದ ಬಳಲುತ್ತಿದ್ದುದು ದೃಢಪಟ್ಟಿತ್ತು. ತಕ್ಷಣವೇ ಅಲ್ಲಿನ ವೈದ್ಯರು ಈಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲು ಮುಂದಾದ ಸಂದರ್ಭದಲ್ಲಿ ಮಹಿಳೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಂತರ ಸೂಕ್ತ ಸುರಕ್ಷಾ ವಿಧಾನಗಳೊಂದಿಗೆ ಮಹಿಳೆಯ ಶವವನ್ನು ಮುಚ್ಚಿ ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಆಕೆಯ ಸ್ವಗ್ರಾಮ ವದ್ಲಿ ಮನುಗನಹಳ್ಳಿಗೆ ರವಾನಿಸಲಾಗಿದ್ದು ನಾಳೆ ಸರ್ಕಾರದ ನಿಯಮಾವಳಿಗಳಂತೆ ಮಹಿಳೆಯ ಶವ ಸಂಸ್ಕಾರ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದ್ದಾರೆ.
ಆತಂಕ ಹೆಚ್ಚಿಸಿದ ಸೋಂಕು
ತಾಲ್ಲೂಕಿನಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ 19 ವೈರಸ್ ನಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅಂದು ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಈ ಸೋಂಕು ಇದೀಗ ಗ್ರಾಮಾಂತರ ಪ್ರದೇಶಕ್ಕೂ ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚು ಕಾಳಜಿ ವಹಿಸಬೇಕು ಹಾಗೂ ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಸುವ ಮೂಲಕ ಸೋಂಕಿನಿಂದ ದೂರವಿರಬೇಕು ಎಂದು ಶಾಸಕ ಕೆ ಮಹದೇವ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.