ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದಡಿ ಬರುವ ರಾಷ್ಟ್ರೀಯ ಪೌಷ್ಟಿಕ ಯೋಜನೆಗೆ (ನ್ಯಾಷನಲ್ ನ್ಯೂಟ್ರಿಶನ್ ಮಿಶನ್) ಅನುದಾನವನ್ನು 3000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಕಳೆದ ವರ್ಷ, ಇದಕ್ಕಾಗಿ 950 ಕೋಟಿ ರೂ. ನೀಡಲಾಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಯೋಜನೆಗೆ, 2017ರಿಂದ 2020ರ ಅವಧಿಗೆ 9,046 ಕೋಟಿ ರೂ.ಗಳನ್ನು ಮೀಸಲಿಡಲು ನಿರ್ಧರಿಸಿತ್ತು. ಇದರ ಭಾಗವಾಗಿ, ಈಗ 3,000 ಕೋಟಿ ರೂ. ನೀಡಲಾಗಿದೆ.
ಈ ಯೋಜನೆಯ ಮೂಲಕ, ರಾಷ್ಟ್ರೀಯ ಪೌಷ್ಟಿಕ ಯೋಜನೆಯಡಿ ಅಪೌಷ್ಟಿಕತೆ, ರಕ್ತಹೀನತೆ, ಕಡಿಮೆ ತೂಕದ ಮಕ್ಕಳ ಜನನವನ್ನು ತಡೆಯಲು ಶ್ರಮಿಸಲಾಗು ತ್ತದೆ. ಇದರ ಲಾಭ ದೇಶದ 10 ಕೋಟಿ ಜನರಿಗೆ ಸಿಗಲಿದೆ. ಇದರಲ್ಲಿ, ಗರ್ಭಿಣಿ ಹಾಗೂ ಬಾಣಂತಿಯರಿಗೆ 6,000 ರೂ. ಅನುದಾನ ನೀಡುವ ವಿಚಾರ ಮಹತ್ವದ್ದು. ಇದು, ಪ್ರಸಕ್ತ ಅಂಕಿ-ಅಂಶಗಳ ಪ್ರಕಾರ, 51.6 ಲಕ್ಷ ಮಹಿಳೆಯರಿಗೆ ಸಹಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಈಗ ನೀಡಲಾಗುತ್ತಿರುವ 3 ಸಾವಿರ ಕೋಟಿ ರೂ. ಅನುದಾನದಲ್ಲಿ 500 ಕೋಟಿ ರೂ. ಮಹಿಳೆಯರ ಸುರಕ್ಷತೆಗಾಗಿ ಮೀಸಲಾಗಿರುವ “ನಿರ್ಭಯಾ ನಿಧಿ’ಗೆ ವರ್ಗಾವಣೆಯಾಗಲಿದೆ. ಇದರಿಂದಾಗಿ, ಈ ನಿಧಿಗೆ ಹರಿದು ಬಂದಿರುವ ಹಣ ಮೊತ್ತ 3,5000 ಕೋಟಿ ರೂ.ಗಳಿಗೆ ಮುಟ್ಟಲಿದೆ. ಇನ್ನು, ಮಕ್ಕಳ ಸುರಕ್ಷತೆಗಾಗಿ 3000 ಕೋಟಿ ರೂ. ಅನುದಾನದಲ್ಲಿ 725 ಕೋಟಿ ರೂ. ಮೀಸಲಿಡಲಾಗುತ್ತದೆ. “ಬೇಟಿ ಬಚಾವೋ, ಬೇಟಿ ಪಢಾವೋ’ ಕಾರ್ಯಕ್ರಮಕ್ಕೆ 280 ಕೋಟಿ ಸಿಗಲಿದೆ. ಕಳೆದ ಬಾರಿ ಈ ಯೋಜನೆಗೆ 200 ಕೋಟಿ ರೂ. ನೀಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಲವಾರು ಕಾರ್ಯಕ್ರಮಗಳಿಗೆ 24,700 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ವರ್ಷ 21,236 ಕೋಟಿ ರೂ. ಮೀಸಲಿಡಲಾಗಿತ್ತು. ಅದರಲ್ಲಿ, 16,334 ಕೋಟಿ ರೂ.ಗಳು ಅಂಗನವಾಡಿ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿತ್ತು.
ಎಸ್ಸಿಎಸ್ಟಿ ಯೋಜನೆಗಳಿಗೆ ಅನುದಾನ ಏರಿಕೆ
ದೇಶದ ಜನಸಂಖ್ಯೆಯಲ್ಲಿ ಬಹುಪಾಲು ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಿತ ಕಾಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಸಮುದಾಯದ ಕಲ್ಯಾಣಕ್ಕಾಗಿ ಚಾಲ್ತಿಯಲ್ಲಿರುವ ಯೋಜನೆಗಳ ಸಂಖ್ಯೆಯನ್ನು 305ಕ್ಕೆ ಏರಿಸಲಾಗಿದೆ. 2017-18ರ ಹಣಕಾಸು ವರ್ಷದಲ್ಲಿ ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ 52,719 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಾರಿ, ಇದರ ಪ್ರಮಾಣವನ್ನು 56,619 ಕೋಟಿ ರೂ.ಗೆ ಏರಿಸಲಾಗಿದೆ. ಅಂತೆಯೇ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಳೆದ ಆರ್ಥಿಕ ವರ್ಷದಲ್ಲಿ 32,508 ರೂ. ಮೀಸಲಿಡಲಾಗಿತ್ತು. 2018-19ರ ವರ್ಷಕ್ಕೆ ಇದರ ಪ್ರಮಾಣವನ್ನು 39,135 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.