Advertisement

ಕೇಳಿದ್ದು 500, ಸಿಕ್ಕಿದ್ದು ಬರೋಬ್ಬರಿ 51 ಲಕ್ಷ ರೂ.!

12:46 AM Dec 20, 2022 | Team Udayavani |

ತಿರುವನಂತಪುರಂ: “ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕಲೂ ನನ್ನ ಬಳಿ ಹಣವಿಲ್ಲ. ಅದಕ್ಕಾಗಿ 500 ರೂ. ಕೊಡಬಹುದೇ’ ಎಂದು ಬೇರೆ ದಾರಿಯಿಲ್ಲದೇ ಮಗನ ಟೀಚರ್‌ ಬಳಿ ಕೇಳಿಕೊಂಡಿದ್ದ ಮಹಿಳೆಯ ಖಾತೆಗೆ ಬರೋಬ್ಬರಿ 51 ಲಕ್ಷ ರೂ.ಗಳು ಬಂದು ಬಿದ್ದಿದೆ!

Advertisement

ಅಚ್ಚರಿಯ ಜತೆಗೆ ತೃಪ್ತಿಯಾಗುವಂಥ ಸುದ್ದಿಯಿದು. ಕೇರಳದ ಪಾಲಕ್ಕಾಡ್‌ನ‌ ಕೂಟ್ಟನಾಡ್‌ ಎಂಬ ಗ್ರಾಮದ ಸುಭದ್ರಾ(46)ಗೆ ಮೂವರು ಮಕ್ಕಳು. ಕೂಲಿ ಕೆಲಸ ಮಾಡಿ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ ಪತಿ ರಾಜನ್‌ ಕಳೆದ ಆಗಸ್ಟ್‌ನಲ್ಲಿ ಕೊನೆಯುಸಿರೆಳೆದರು. ಅದಾದ ಬಳಿಕ ಕುಟುಂಬ ಬೀದಿಗೆ ಬಿತ್ತು. ಮಕ್ಕಳನ್ನು ಸಲಹುವುದೇ ಸುಭದ್ರಾಗೆ ದೊಡ್ಡ ಸವಾಲಾಗಿತ್ತು. ಮೂವರು ಮಕ್ಕಳ ಪೈಕಿ ಒಂದು ಮಗುವಿಗೆ ಸೆರೆಬ್ರಲ್‌ ಪಾಲ್ಸಿ ಎಂಬ ರೋಗ. ಹೀಗಾಗಿ, ಹಾಸಿಗೆ ಹಿಡಿದಿರುವ ಆ ಮಗುವನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇರುವ ಕಾರಣ ಸುಭದ್ರಾ ಹೊರಗೆ ಎಲ್ಲೂ ಕೆಲಸಕ್ಕೂ ಹೋಗಲು ಸಾಧ್ಯವಿರಲಿಲ್ಲ.

ಮಕ್ಕಳಿಗೆ ಊಟ ಹಾಕಲೂ ಗತಿಯಿಲ್ಲದ ಸ್ಥಿತಿ ಬಂದ ಕಾರಣ, ಬೇರೆ ದಾರಿ ಕಾಣದೇ ಸುಭದ್ರಾ ಇತ್ತೀಚೆಗೆ ತನ್ನ ಕಿರಿಯ ಮಗನ ಹಿಂದಿ ಟೀಚರ್‌ ಗಿರಿಜಾ ಹರಿಕುಮಾರ್‌ಗೆ ಕರೆ ಮಾಡಿ, “ಮಕ್ಕಳಿಗೆ ಊಟ ಹಾಕಲು 500 ರೂ. ಕೊಡಬಹುದಾ’ ಎಂದು ಕೇಳಿದ್ದರು. ಕೂಡಲೇ ಶಿಕ್ಷಕಿ ಗಿರಿಜಾ 1,000 ರೂ. ನೀಡಿದ್ದರು. ಕೆಲ ದಿನಗಳ ಅನಂತರ ಸುಭದ್ರಾರ ಮನೆಗೆ ಹೋದಾಗ ಗಿರಿಜಾ ಅವರಿಗೆ ಕುಟುಂಬದ ನೈಜ ಸ್ಥಿತಿ ನೋಡಿ ಖೇದವಾಯಿತು.

ಸಾಮಾಜಿಕ ಜಾಲತಾಣದ ಮೊರೆ: ಅಲ್ಲಿಂದ ಹಿಂದಿರುಗಿದ ಶಿಕ್ಷಕಿ ಗಿರಿಜಾ ಸಾಮಾಜಿಕ ಜಾಲತಾಣದಲ್ಲಿ ಈ ಕುಟುಂಬದ ವ್ಯಥೆಯನ್ನು ಬರೆದು, ಸಹಾಯ ಮಾಡಲಿಚ್ಛಿಸು ವವರು ಮಾಡಲಿ ಎಂದು ಸುಭದ್ರಾರ ಬ್ಯಾಂಕ್‌ ಖಾತೆ ವಿವರವನ್ನು ಅಪ್‌ಲೋಡ್‌ ಮಾಡಿದ್ದರು. ಇದಾದ ಕೇವಲ 48 ಗಂಟೆಗಳಲ್ಲಿ ಸುಭದ್ರಾರ ಖಾತೆಗೆ ಬರೋಬ್ಬರಿ 51 ಲಕ್ಷ ರೂ. ಬಂದು ಜಮೆಯಾಯಿತು. ಸಹಾಯ ಮಾಡಿದ ಎಲ್ಲರಿಗೂ ಸುಭದ್ರಾ ಮತ್ತು ಗಿರಿಜಾ ಧನ್ಯವಾದ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next