ಬೆಂಗಳೂರು: ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಸರ್ ಅನಿಲ ಸೋರಿಕೆಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ನಾಲ್ಕು ವರ್ಷ ಮಗು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೃದಯ ವಿದ್ರಾವಕ ಘಟನೆ ಸದಾಶಿವನಗರದ ಅಶ್ವತ್ಥನಗರದಲ್ಲಿ ಶನಿವಾರ ನಡೆದಿದೆ.
ಅಶ್ವತ್ಥನಗರ ನಿವಾಸಿ ಜಗದೀಶ್ ಅವರ ಪತ್ನಿ ರಮ್ಯಾ(23) ಮೃತ ಮಹಿಳೆ. ಅವರ ನಾಲ್ಕು ವರ್ಷದ ಪುತ್ರ ಸಾಮ್ರಾಟ್ ಅಸ್ವಸ್ಥಗೊಂಡು, ಎಂ.ಎಸ್.ರಾಮಯ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ರಮ್ಯಾ, ತಮ್ಮ ನಾಲ್ಕು ವರ್ಷದ ಮಗ ಸಾಮ್ರಾಟ್ ಜತೆ ಸ್ನಾನ ಮಾಡಲು ಹೋಗಿದ್ದಾರೆ. ಈ ವೇಳೆ ಗ್ಯಾಸ್ ಗೀಸರ್‌ನಿಂದ ವಿಷ ಅನಿಲ ಕಾರ್ಬನ್ ಮಾನಕ್ಸೈಡ್ ಸೋರಿಕೆಯಾಗಿದೆ. ವಿಷ ಅನಿಲ ಸೇವಿಸಿದ್ದರಿಂದ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ತಾಯಿ-ಮಗು ಕುಸಿದು ಬಿದ್ದಿದ್ದಾರೆ. ಕೆಲ ಹೊತ್ತಾದರೂ ಸಾನ್ನದ ಮನೆಯಿಂದ ಹೊರ ಬಾರದಿದ್ದಕ್ಕೆ ಅನುಮಾನ ಕೊಂಡು ಪತಿ ಜಗದೀಶ್, ಬಾಗಿಲು ಬಡಿದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಬಾಗಿಲು ಒಡೆದು ನೋಡಿದಾಗ ತಾಯಿ, ಮಗ ಕುಸಿದು ಬಿದ್ದಿರುವುದು ಗೊತ್ತಾಗಿದೆ.
ಕೂಡಲೇ ಸ್ಥಳೀಯರ ನೆರವು ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ದ ಕೆಲ ಕ್ಷಣಗಳಲ್ಲೇ ಚಿಕಿತ್ಸೆ ಫಲಕಾರಿಯಾಗದೇ ರಮ್ಯಾ ಮೃತಪಟ್ಟಿದ್ದಾರೆ. ಮಗುವಿಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.