ಮುಂಬಯಿ : ತನ್ನ ಪರಿಚಯದ ಮಹಿಳೆಯೊಂದಿಗೆ ನಿನ್ನೆ ಗುರುವಾರ ರಾತ್ರಿ ನಗರದ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿದ್ದ ಮುಂಬಯಿ ವ್ಯಕ್ತಿಯೋರ್ವ ಮಹಿಳೆಯ ಕುತ್ತಿಗೆ ಬಿಗಿದು ಸಾಯಿಸುವ ಯತ್ನ ನಡೆಸಿದ್ದು , ಸಹ-ಪ್ರಯಾಣಿರಿಂದ ಜಾಗೃತರಾದ ಪೊಲೀಸರು ಆರೋಪಿಯನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ವಿಕಲಾಂಗರ ಕಂಪಾರ್ಟ್‌ಮೆಂಟಲ್ಲಿ ಮಹಿಳೆಯ ಜತೆಗಾರನಿಂದಲೇ ಚಲಿಸುತ್ತಿದ್ದ ರೈಲಿನಲ್ಲಿ ನಡೆದ ಈ ಪೈಶಾಚಿಕ ಕೃತ್ಯದ ವಿಡಿಯೋ ಚಿತ್ರಿಕೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಇದನ್ನು ವೀಕ್ಷಿಸಿ ಸಹಸ್ರಾರು ಮಂದಿ, ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಖಂಡಿಸಿದ್ದಾರೆ.
ಥಾಣೆ – ಛತ್ರಪತಿ ಶಿವಾಜಿ ಟರ್ಮಿನಸ್ ಟ್ರೈನ್‌ನಲ್ಲಿ ನಡೆದ ಈ ಘಟನೆಯ ಪ್ರತ್ಯಕ್ಷದರ್ಶಿ ಸಹ ಪ್ರಯಾಣಿಕರು ಒಡನೆಯೇ ದಾದರ್ ಪೊಲೀಸರನ್ನು ಜಾಗೃತಗೊಳಿಸಿದರು. ಅವರು ಕೂಡಲೇ ಆರೋಪಿ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿ ಆತನ ವಿರುದ್ಧ ಕೊಲೆ ಯತ್ನ ಮತ್ತು ಲೈಂಗಿಕ ದೌರ್ಜನ್ಯದ ಕೇಸನ್ನು ದಾಖಲಿಸಿದರು.
ಬಂಧಿತ ವ್ಯಕ್ತಿಯನ್ನು ರಫೀಕ್ ಶೇಖ್ ಎಂದು ಗುರುತಿಸಲಾಗಿದೆ. ಆತ ಮಹಿಳೆಗೆ ಭಾರೀ ದೊಡ್ಡ ಮೊತ್ತದ ಸಾಲವಾಗಿ ಪಡೆದ ಹಣವನ್ನು ಮರುಪಾವತಿಸುವುದಿತ್ತು. ಈ ವಿಷಯಕ್ಕೆ ಸಂಬಂಧಿಸಿ ಉಭಯತರ ನಡುವೆ ಚಲಿಸುತ್ತಿದ್ದ ರೈಲಿನಲ್ಲೇ ಜಗಳ ಉಂಟಾಗಿತ್ತು.
ಈ ಜಗಳದ ಪರಾಕಾಷ್ಠೆಯಲ್ಲಿ ಆರೋಪಿ ರಫೀಕ್, ಮಹಿಳೆಯ ಕುತ್ತಿಗೆಯನ್ನು ಬಿಗಿದು ಸಾಯಿಸುವ ಯತ್ನ ನಡೆಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೂ ನಡೆಸಿದ ಎಂದು ಪೊಲೀಸರು ತಿಳಿಸಿದ್ದಾರೆ.