ಉಡುಪಿ: ಚಲಿಸುತ್ತಿರುವ ರೈಲಿನಿಂದ ಕೆಳಕ್ಕೆ ಧುಮುಕಿ ಮಹಿಳೆಯೊಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.
ತಿರುವನಂತಪುರ – ನಿಜಾಮುದ್ದೀನ್ ರೈಲಿನಲ್ಲಿ (22655) ಸಂಚರಿಸುತ್ತಿದ್ದ ಮಹಿಳೆ ಶನಿವಾರ ರಾತ್ರಿ ವೇಳೆ ಬೈಂದೂರು ನಿಲ್ದಾಣದಲ್ಲಿ ಕೆಳಗೆ ಹಾರಿ ಗಾಯಗೊಂಡಳು. ಕೂಡಲೇ ಅವರನ್ನು ರಿಕ್ಷಾ ಚಾಲಕ ಮಹೇಶ್ ಅವರು ಬೈಂದೂರಿನ ಅಂಜಲಿ ಆಸ್ಪತ್ರೆಗೆ ದಾಖಲಿಸಿದರು.
“ಇವರು ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದು ಉಡುಪಿ ರೈಲು ನಿಲ್ದಾಣದಲ್ಲಿ ಬೈಂದೂರಿಗೆ ಹೋಗಲು ಜನರಲ್ ಟಿಕೆಟ್ ಪಡೆದಿದ್ದರು. ಅವರು ತಪ್ಪಾಗಿ ತಿಳಿದು ದಿಲ್ಲಿಗೆ ತೆರಳುವ ಈ ರೈಲನ್ನು ಹತ್ತಿದ್ದರು. ಈ ರೈಲಿಗೆ ಉಡುಪಿ ಬಿಟ್ಟರೆ ಮುಂದಿನ ನಿಲುಗಡೆ ಇರುವುದು ಕಾರವಾರದಲ್ಲಿ. ರೈಲು ಬೈಂದೂರು ನಿಲ್ದಾಣದ ಮೂಲಕ ಹಾದು ಹೋಗುವಾಗ ಅವರು ಕೆಳಗೆ ಹಾರಿದರು’ ಎಂದು ಮಹಿಳೆಯ ಸಹೋದರ ತಿಳಿಸಿದ್ದಾರೆ. ಅವರ ತಲೆಗೆ ಸಾಮಾನ್ಯ ಗಾಯವಾಗಿ ರಕ್ತ ಹರಿದಿತ್ತು. ಅವರೀಗ ಅಪಾಯದಿಂದ ಪಾರಾಗಿದ್ದಾರೆ. ಮೊದಲ ಹಂತದ ಚಿಕಿತ್ಸೆ ನೀಡಲಾಗಿದ್ದು ಮುಂದಿನ ಹಂತದ ಚಿಕಿತ್ಸೆಯ ಅಗತ್ಯವಿದೆ ಎಂದು ರೈಲ್ವೆ ಸುರಕ್ಷಾ ಪೊಲೀಸ್ ಪ್ರಕಟನೆ ತಿಳಿಸಿದೆ.
ಯಾರೂ ಈ ರೀತಿ ರೈಲಿನಿಂದ ಜಿಗಿಯಬಾರದು. ಮುಂಚಿತವಾಗಿ ವಿಚಾರಿಸಿಕೊಂಡು ರೈಲನ್ನು ಏರಬೇಕು. 182 ಸಹಾಯವಾಣಿಗೆ ಕರೆ ನೀಡಿ ಮಾಹಿತಿ ಪಡೆಯಬಹುದು ಎಂದು ರೈಲ್ವೆ ಸುರಕ್ಷಾ ಪೊಲೀಸರು ತಿಳಿಸಿದ್ದಾರೆ.