ಪೆನ್ಸಿಲ್ವೇನಿಯಾ, ಅಮೆರಿಕ : ಭಾರತದಂತೆ ಅಮೆರಿಕದಲ್ಲಿ ಕೂಡ ಅಲ್ಲಿನ ಜನರಿಗೆ ಎದೆ ಒಡೆದು ಹೋಗುವ ರೀತಿಯಲ್ಲಿ ಕೆಲವೊಮ್ಮೆ ಕೋಟಿ ಗಟ್ಟಲೆಯ ವಿದ್ಯುತ್ ಬಿಲ್ ಬರುತ್ತದೆ ಎಂದರೆ ನೀವು ನಂಬಲೇಬೇಕು.
ಅಮೆರಿಕದ ಪೆನ್ಸಿಲ್ವೇನಿಯದ ಹಿರಿಯ ವಯಸ್ಸಿನ ಮೇರಿ ಹೋರೊಮನ್‌ಸ್ಕಿ ಎಂಬ ಮಹಿಳೆಗೆ ಬರೋಬ್ಬರಿ 284,460,000,000 ಡಾಲರ್ (ಹೆಚ್ಚು ಕಡಿಮೆ 15.9 ಲಕ್ಷ ಕೋಟಿ ರೂ.) ವಿದ್ಯುತ್ ಬಿಲ್ ಬಂದಿದೆ. ಇದನ್ನು ಕಂಡ ಆಕೆಗೆ ಹಾರರ್ ಚಿತ್ರ ಕಂಡ ಅನುಭವವಾಗಿ ವಿಪರೀತ ಶಾಕ್ ಆಗಿದೆ.
ಕೇವಲ ಕ್ರಿಸ್‌ಮಸ್ ಹಬ್ಬದ ದಿನದಂದು ಮನೆಯ ಒಳ ಹೊರಗನ್ನು ವಿದ್ಯುದ್ದೀಪಗಳಿಂದ ಬೆಳಗಿದ್ದಕ್ಕೆ ತನಗೆ ಇಷ್ಟೊಂದು ಬಿಲ್ ಬರಲು ಸಾಧ್ಯವೇ ಎಂದಾಕೆ ದಂಗಾಗಿದ್ದಾಳೆ.
ಒಂದೇ ಒಂದು ಸಮಾದಾನದ ಸಂಗತಿ ಎಂದರೆ ಈ ಬಿಲ್ ಪಾವತಿಸಲು ಆಕೆಗೆ ಮುಂದಿನ ವರ್ಷ ನವೆಂಬರ್ ವರೆಗೆ ಕಾಲಾವಕಾಶ ಇದೆ !
ಎದೆ ಒಡೆದು ಹೋಗುವ ಈ ವಿದ್ಯುತ್ ಬಿಲ್ ಬಂದಾಕ್ಷಣ 58ರ ಹರೆಯದ ಐದು ಮಕ್ಕಳ ತಾಯಿ ಮೊದಲು ಲೆಕ್ಕ ಹಾಕುತ್ತಾ ಹೋದದ್ದು ಕೊಮಾಗಳನ್ನು – ನೂರುಗಳು, ಸಾವಿರಗಳು, ಮಿಲಿಯಗಳು, ಬಿಲಿಯಗಳು ! ಇಷ್ಟೊಂದು ದೊಡ್ಡ ಮೊತ್ತವನ್ನು ಯಾರಿಗಾದರೂ ಓದಲು ಸಾಧ್ಯವೇ ಎಂದಾಕೆ ಧೊಪ್ಪನೆ ಕುರ್ಚಿಯ ಮೇಲೆ ಬಿದ್ದಳು.
ಭಾರತದಲ್ಲಿ ಕಂಡು ಬರುವಂತೆ ಅಮೆರಿಕದಲ್ಲಿಯೂ ವಿದ್ಯುತ್ ಬಿಲ್ ಅಚಾತುರ್ಯದಿಂದ ಜನರಿಗೆ ಆಗೀಗ ಶಾಕ್ ಆಗುವುದಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎನ್ನಬೇಕು.
ದಿ ವಾಷಿಂಗ್ಟನ್ ಪೋಸ್ಟ್ ಈ ಒಟ್ಟು ಪ್ರಹಸನವನ್ನು ಚೋದ್ಯದಿಂದ ವರದಿ ಮಾಡಿ ಅಮೆರಿಕದ ವಿದ್ಯುತ್ ಇಲಾಖೆಯ ಕಾರ್ಯ ವೈಖರಿಗೆ ಕನ್ನಡಿ ಹಿಡಿದಿದೆ.