ಗುಣ, ನಡತೆ, ಸೌಂದರ್ಯ, ಒಲವು-ನಿಲುವುಗಳೆಲ್ಲದರಲ್ಲೂ ನಿಮಗಿಂತಲೂ ಒಂದು ಕೈ ಮೇಲಿರುವ ಹುಡುಗಿ ಈಗ ನನ್ನ ಜೊತೆಯಾಗಿದ್ದಾಳೆ, ಬಾಳು ಬೆಳಗುತ್ತಿದ್ದಾಳೆ. ನಿಮ್ಮೆಲ್ಲರ ಹಾರೈಕೆಯ ಫಲವಿರಬಹುದೇನೋ; ಅದ್ಕೆ ಹೇಳ್ತಿದ್ದೀನಿ- ಥ್ಯಾಂಕ್ಸ್ ಕಣ್ರೆ!
ನನ್ನ ಜೀವನದಲ್ಲಿ ಹೀಗೆ ಬಂದು, ಹಾಗೆ ಹೋದ ಹುಡುಗಿಯರೇ, ಮತ್ತೆ ನಿಮ್ಮನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ದೂರಾದರೆಂಬ ಕೊರಗಿನಿಂದಾಗಲಿ, ಉಳಿಸಿ ಹೋದ ನೆನಪುಗಳಿಂದಾಗಲಿ ಅಲ್ಲ; ನನ್ನ ಭಾವಿ ಜೀವನಕ್ಕೆ ಕಾಟಾಚಾರಕ್ಕೋ, ಕೈ ಕೊಟ್ಟು ಹೋಗುತ್ತಿರುವ ಅಪರಾಧಿ ಪ್ರಜ್ಞೆಯಿಂದಲೋ, ಸಾಂತ್ವನದ ನುಡಿಯಾಗಿಯೋ, ಬದುಕಲು ಭರವಸೆ ತುಂಬಲೋ ಒಂದು ಸಾಲಿನಲ್ಲಿ ಹಾರೈಸಿದಿರಲ್ಲ, ಆ ಕಾರಣಕ್ಕೆ. ಅದಕ್ಕೆ ನಿಮಗೆಲ್ಲ ಧನ್ಯವಾದ ಹೇಳಬೇಕೆನಿಸುತ್ತಿದೆ!
ಆ ದಿನ ನೆನಪಿದೆಯಾ? ನಿಮ್ಮಿಂದ ದೂರವಾಗಿ ಜೀವನ ಪೂರ್ತಿ ನಿಮ್ಮ ಕೊರಗಲ್ಲೇ ಇರ್ತೀನೇನೋ ಅನ್ನೋ ದೂರಾಲೋಚನೆಯಿಂದ- “ಸಾರಿ ಕಣೋ, ನೀನೇನೂ ಯೋಚನೆ ಮಾಡಬೇಡ. ನಿನ್ನ ಮುಗ್ಧತೆ, ಒಳ್ಳೇತನ, ಪ್ರಾಮಾಣಿಕ ಪ್ರೀತಿಗೆ ಖಂಡಿತವಾಗಿಯೂ ನನಗಿಂಥ ಒಳ್ಳೇ ಹುಡುಗಿ ಸಿಕ್ಕೇ ಸಿಗ್ತಾಳೆ’ ಅಂತ ಹಾರೈಸಿದ್ದಿರಲ್ಲ, ಅದು ಈಗ ನಿಜವಾಗಿದೆ.
ಮೊದಲ ನೋಟದಲ್ಲೇ ಎದೆಯಲ್ಲಿ ಅಲ್ಲೋಲ-ಕಲ್ಲೋಲ ಎಬ್ಬಿಸಿದ್ದ ಕುಳ್ಳಿಯ ಲವಲವಿಕೆ, ನನಗೂ ನೋವಾಗದಂತೆ ತನಗೂ ಅಪರಾಧಿ ಭಾವ ಕಾಡದಂತೆ ಜಾಣ ಕಾರಣ ಹೇಳಿ ಜಾರಿಕೊಂಡ ಜಮುನಾಳ ಗುಳಿ ಕೆನ್ನೆ, ಇನ್ನೇನು ಮದುವೆ ಹಂತಕ್ಕೆ ಬಂದು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ “ತಾಳಿದವನು ಬಾಳಿಯಾನು’ ಎಂದು ಕಾಯಿಸುತ್ತಲೇ ಸತಾಯಿಸಿದ ಸರಸ್ವತಿಯ ಸರಳತೆ, ನನ್ನ ಕವಿತ್ವವನ್ನು ಕೆಣಕಿ, ಕಾವ್ಯ ರಚನೆಗೆ ತಳ್ಳುತ್ತಿದ್ದ ಕಾವ್ಯಕನ್ನಿಕೆ ಕಮಲಾಳ ಕೋಮಲ ಮೈಮಾಟ, ಸೌಂದರ್ಯದ ಶಿಖರವೇ ಧರೆಗಿಳಿದಂತಿದ್ದ ಚೆಲುವೆ ಸನ್ಮತಿಯ ಸೌಂದರ್ಯ… ಎಲ್ಲವನ್ನೂ ತಾನೇ ಹೊತ್ತುಕೊಂಡು ನನಗಾಗಿಯೇ ಹುಟ್ಟಿದ ಚೆಲುವೆ ಈಗ ನನಗೆ ಸಿಕ್ಕಿದ್ದಾಳೆ; ದಕ್ಕಿದ್ದಾಳೆ.
ಹಳೆ ಹುಡುಗಿಯರೇ, ಗುಣ, ನಡತೆ, ಸೌಂದರ್ಯ, ಒಲವು-ನಿಲುವುಗಳೆಲ್ಲದರಲ್ಲೂ ನಿಮಗಿಂತಲೂ ಒಂದು ಕೈ ಮೇಲಿರುವ ಹುಡುಗಿ ಈಗ ನನ್ನ ಜೊತೆಯಾಗಿದ್ದಾಳೆ, ಬಾಳು ಬೆಳಗುತ್ತಿದ್ದಾಳೆ. ನಿಮ್ಮೆಲ್ಲರ ಹಾರೈಕೆಯ ಫಲವಿರಬಹುದೇನೋ; ಅದ್ಕೆ ಹೇಳ್ತಿದ್ದೀನಿ- ಥ್ಯಾಂಕ್ಸ್ ಕಣ್ರೆ!
ಇಂತಿ ನಿಮ್ಮವನಾಗದ
-ಅಶೋಕ ವಿ. ಬಳ್ಳಾ