ಮುಂಬಯಿ : ಇಬ್ಬರು ವ್ಯಕ್ತಿಗಳಿಂದ ಅತ್ಯಾಚಾರಕ್ಕೆ ಗುರಿಯಾಗಿದ್ದ ಮಹಿಳೆಯೊಬ್ಬಳು ಅವರಿಂದ ತಪ್ಪಿಸಿಕೊಳ್ಳಲು ತಾನಿದ್ದ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಘಟನೆಯು ದಕ್ಷಿಣ ಮುಂಬಯಿಯಲ್ಲಿ ನಡೆದಿದೆ.
ಪೊಲೀಸರು ಇಬ್ಬರೂ ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ. ಕಟ್ಟಡದಿಂದ ಕೆಳಕ್ಕೆ ಜಿಗಿದ ಮಹಿಳೆಯು ಗಂಭೀರವಾಗಿ ಗಾಯಗೊಂಡು ಕಟ್ಟಡದ ಡಕ್ಟ್ (ಕೊಳವೆಗಳು) ಇರುವಲ್ಲಿ ನಸುಕಿನ ವೇಳೆ ಬಿದ್ದಿರುವುದನ್ನು ಜನರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಮಹಿಳೆಯು ಉತ್ತರ ಪ್ರದೇಶದವಳೆಂದು ಗೊತ್ತಾಗಿದೆ. ಪೊಲೀಸರು ಮಹಿಳೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅತ್ಯಾಚಾರಿಗಳಲ್ಲಿ ಒಬ್ಬನಾಗಿರುವ ಆರೋಪಿಯು ಮಹಿಳೆಗೆ ಪರಿಚಿತನಾಗಿದ್ದು ಆಕೆಯನ್ನು ಹತ್ತು ದಿನಗಳ ಹಿಂದೆಯೇ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ನೆರೆಯ ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣಕ್ಕೆ ಕರೆತಂದಿದ್ದ. ಅಲ್ಲಿ ಆತ ಕಳೆದ ಎಂಟು ದಿನಗಳಿಂದಲೂ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ.
ನಿನ್ನೆ ಗುರುವಾರ ಆರೋಪಿಯ ಮಹಿಳೆಯನ್ನು ಪೈಧಣಿಯಲ್ಲಿನ ತನ್ನ ಸ್ನೇಹಿತನ ಗೋದಾಮು -ನಿವಾಸದ ಕಟ್ಟಡಕ್ಕೆ ಕರೆ ತಂದಿದ್ದ. ಮೂವರೂ ರಾತ್ರಿ ಊಟ ಮುಗಿಸಿ ಐದು ಮಹಡಿಗಳ ಕಟ್ಟಡವೊಂದಕ್ಕೆ ತೆರಳಿದ್ದರು. ಅಲ್ಲಿ ಇಬ್ಬರೂ ಸೇರಿಕೊಂಡು ಮಹಿಳೆಯ ಮೇಲೆ ಸರದಿ ಪ್ರಕಾರ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನಸುಕಿನ ನಾಲ್ಕು ಗಂಟೆಯ ವೇಳೆಗೆ ಮಹಿಳೆಯು ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಕಟ್ಟಡದ ಮೇಲಿಂದ ಕೆಳಕ್ಕೆ ಹಾರಿದ್ದಳು. ಪರಿಣಾಮವಾಗಿ ಕಾಲಿಗೆ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದಳು.ಪ್ರಕರಣವನ್ನು ದಾಖಲಿಸಿಕೊಂಡು ಇಬ್ಬರೂ ಅತ್ಯಾಚಾರಿಗಳನ್ನು ಬಂಧಿಸಲಾಗಿದೆ ಎಂದು ಡಿವೈಎಸ್ಪಿ ಜ್ಞಾನೇಶ್ವರ್ ಚವಾಣ್ ತಿಳಿಸಿದ್ದಾರೆ.