ಬೆಳ್ತಂಗಡಿ: ಬೆಳಾಲು ಗ್ರಾಮದ ಮಾಚಾರಿನ ಕೆಂಚನೊಟ್ಟು ಎಂಬಲ್ಲಿ ವಿವಾಹಿತ ಮಹಿಳೆಯ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ನ. 3ರಂದು ನಡೆದಿದ್ದು, ಈ ವಿಚಾರವಾಗಿ ಕೊಲೆಯಾದ ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಾಲು ಗ್ರಾಮದ ಮಾಚಾರು ಕೆಂಪನೊಟ್ಟು ನಿವಾಸಿ ಶಶಿಕಲಾ (27) ಮೃತಪಟ್ಟವರು. ಶಶಿಕಲಾ ಪತಿ ಸುಧಾಕರ ನಾಯ್ಕ (30)ನನ್ನು ಬಂಧಿಸಲಾಗಿದೆ.
ಮೃತ ಶಶಿಕಲಾ ಹಾಗೂ ಪತಿ ಸುಧಾಕರ್ ನಾಯ್ಕ ಸಂಬಂಧಿಕರಾಗಿದ್ದು, ಪರಸ್ಪರ ಪ್ರೀತಿಸಿ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತಿ ಸುಧಾಕರ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ. ಇವರಿಬ್ಬರು ಇಲ್ಲಿನ ತೋಟದ ಮನೆಯಲ್ಲಿಯೇ ವಾಸಿಸುತ್ತಿದ್ದರು. ಇವರಿಗೆ 6 ವರ್ಷದ ಮಗಳಿದ್ದು, ಮಗಳು ಅಜ್ಜಿಮನೆಗೆ ತೆರಳಿದ್ದಳು.
ಗುರುವಾರ ರಾತ್ರಿ ಪತಿ, ಪತ್ನಿ ಮಾತ್ರ ಮನೆಯಲ್ಲಿದ್ದರು. ಶುಕ್ರವಾರ ಬೆಳಗ್ಗೆ ಪತಿ ಸುಧಾಕರ ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿ ಬೇಗ ಮನೆಗೆ ಹಿಂದಿರುಗಿದ್ದ. ಈ ವೇಳೆ ಶಶಿಕಲಾ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ ಎಂದು ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ತೋರಟ್, ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್ ಕದ್ರಿ ಹಾಗೂ ಇತರ ಅಧಿಕಾರಿಗಳು ಆಗಮಿಸಿದ್ದರು. ಮೃತದೇಹವನ್ನು ಸ್ಥಳೀಯ ಶೌರ್ಯ ವಿಪತ್ತು ನಿರ್ವಹಣ ಘಟಕದವರ ಸಹಕಾರದಿಂದ ಬಾವಿಯಿಂದ ಮೇಲಕ್ಕೆತ್ತಲಾಯಿತು. ವಿಧಿವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆಗೂ ಕಳುಹಿಸಲಾಗಿದೆ.
ಪತಿ ಮೇಲೆಯೇ ಸಂಶಯ
ಪ್ರಕರಣ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದ್ದರೂ, ಸ್ಥಳದಲ್ಲಿ ಬಾವಿಗೆ ಹೋಗುವ ಹಾದಿಯಲ್ಲಿ ಎಳೆದೊಯ್ದಂತೆ ಗುರುತುಗಳು ಕಂಡು ಬಂದಿದೆ. ಹೊರನೋಟಕ್ಕೆ ಇದೊಂದು ಕೊಲೆ ಪ್ರಕರಣ ಎಂಬ ಅನುಮಾನ ವ್ಯಕ್ತವಾಗುತ್ತಿದ್ದಂತೆ ಶಶಿಕಲಾ ಪತಿ ಸುಧಾಕರ ನಾಯ್ಕನನ್ನು ಧರ್ಮ ಸ್ಥಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುದ್ದಾರೆ.
ಈತನಿಂದ ಹೆಚ್ಚಿನ ಮಾಹಿತಿ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಶುಕ್ರವಾರ ಘಟನೆಗೆ ಮುನ್ನವೂ ಪತಿ, ಪತ್ನಿ ಮಧ್ಯೆ ಮಾತಿನ ಚಕಮಕಿ ನಡೆದಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.