ಮುಂಬಯಿ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಚಿಂಚನಿ ಬೀಚ್‌ನಲ್ಲಿ ಬುಧವಾರ ತಡರಾತ್ರಿ ಆಹಾರ ಮಳಿಗೆಗೆ ಕಾರೊಂದು ನುಗ್ಗಿ ಮಹಿಳೆ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜನವರಿ 26 ರಜಾ ದಿನವಾದ ಕಾರಣ ಸಂಜೆಯ ವೇಳೆಗೆ ತಾರಾಪುರದ ಚಿಂಚಣಿ ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆದಾಗ್ಯೂ, ಜನಸಂದಣಿಯನ್ನು ಲೆಕ್ಕಿಸದೆ ಬೀಚ್‌ಗೆ ಬಂದ ಕಾರೊಂದು ಸ್ಕೂಟರನ್ನು ತಪ್ಪಿಸಲು ಪ್ರಯತ್ನಿಸುವಾಗ ಚಾಲಕ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ.
ಕಾರು ಸ್ಟ್ರೀಟ್ ಫುಡ್ ಅಂಗಡಿಯೊಂದಕ್ಕೆ ನುಗ್ಗಿದೆ. ಪರಿಣಾಮವಾಗಿ ಸ್ಟಾಲ್‌ನಲ್ಲಿ ತಿನ್ನುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಕಾರಿನ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ನಂತರ, ಬೀಚ್‌ನಲ್ಲಿದ್ದ ಹಲವರು ಕಾರಿನ ವಿಂಡ್‌ಸ್ಕ್ರೀನನ್ನು ಒಡೆದು ಹಾಕಿದರು, ಆದರೆ ಕೆಲವು ಆಹಾರ ಮಳಿಗೆಗಳನ್ನು ಹಾನಿಗೊಳಿಸಿದರು, ಕುರ್ಚಿಗಳನ್ನು ಎಸೆದರು. ಸುಮಾರು ಒಂದು ಗಂಟೆಗಳ ಕಾಲ ದಂಗೆಯ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ವಂಗಂ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಜನರ ಆಕ್ರೋಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.