ನವದೆಹಲಿ: ಪಿಟ್ ಬುಲ್ ಜಾತಿಯ ನಾಯಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ ಪರಿಣಾಮ ಆಕೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಹರ್ಯಾಣದ ಗುರುಗ್ರಾಮ್ ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕೊಂಕಣ ಭಾಗದಲ್ಲಿ ಭಾರಿ ಮಳೆ: ಕೃಷ್ಣಾ ನದಿಗೆ 2 ಲಕ್ಷ ಕ್ಯುಸೆಕ್ ನೀರು; ಮತ್ತೆ ಪ್ರವಾಹ ಭೀತಿ
ಪ್ರಾಥಮಿಕ ಮಾಹಿತಿ ಪ್ರಕಾರ, ಮಹಿಳೆಯ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಪಿಟ್ ಬುಲ್ ಮಾಲೀಕರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ತಿಳಿಸಿದೆ. 30 ವರ್ಷದ ಮಹಿಳೆ ಮೇಲೆ ಪಿಟ್ ಬುಲ್ ನಾಯಿ ದಾಳಿ ನಡೆಸಿದ ಪರಿಣಾಮ ಆಕೆಯ ತಲೆ ಮತ್ತು ಮುಖದ ಭಾಗ ಹರಿದು ಹೋಗಿರುವುದಾಗಿ ವರದಿ ವಿವರಿಸಿದೆ.
ಇತ್ತೀಚೆಗೆ ಲಕ್ನೋದಲ್ಲಿಯೂ ಕೂಡಾ 82 ವರ್ಷದ ಮಹಿಳೆ ಮೇಲೆ ಪಿಟ್ ಬುಲ್ ನಾಯಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ದಾಳಿಗೊಳಗಾದ ಮಹಿಳೆಯನ್ನು ಗುರುಗ್ರಾಮ್ ಹೌಸಿಂಗ್ ಸೊಸೈಟಿ ನಿವಾಸಿ ಮುನ್ನಿ (30ವರ್ಷ) ಎಂದು ಗುರುತಿಸಲಾಗಿದೆ. ಪಿಟ್ ಬುಲ್ ಮಾಲೀಕನನ್ನು ವಿನೀತ್ ಚಿಕಾರಾ ಎಂದು ಗುರುತಿಸಲಾಗಿದೆ. ಚಿಕಾರಾ ನಾಯಿಯನ್ನು ಹೊರಗೆ ಕರೆದೊಯ್ದಿದ್ದ ಸಂದರ್ಭದಲ್ಲಿ ಮುನ್ನಿ ಮೇಲೆ ದಾಳಿ ನಡೆಸಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.