ನವದೆಹಲಿ:ಭಾರತ ಮಾರಣಾಂತಿಕ ಎರಡನೇ ಕೋವಿಡ್ ಅಲೆಗೆ ತತ್ತರಿಸಿ ಹೋಗಿದ್ದು, ದೇಶಾದ್ಯಂತ ಹೇಳಿಕೊಳ್ಳಲಾಗದಂತಹ ದುರಂತ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲಿ ಬೆಡ್ ಸಿಗದೆ ನೋಯ್ಡಾ ಆಸ್ಪತ್ರೆಯ ಹೊರಗೆ ಕಾರಿನೊಳಗೆಯೇ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:“ದೆಹಲಿಗೆ ತಕ್ಷಣವೇ ಆಕ್ಸಿಜನ್ ಸರಬರಾಜು ಮಾಡಿ, ಇಲ್ಲ ನ್ಯಾಯಾಂಗ ನಿಂದನೆ ಎದುರಿಸಿ”
ನೋಯ್ಡಾದ ಸರ್ಕಾರಿ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ 35ವರ್ಷದ ಕೋವಿಡ್ ಸೋಂಕಿತ ಮಹಿಳೆ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ಮಹಿಳೆ ಜತೆ ಬಂದಿದ್ದ ವ್ಯಕ್ತಿ ಆಸ್ಪತ್ರೆಯ ಅಧಿಕಾರಿಗಳಲ್ಲಿ ಬೆಡ್ ನೀಡುವಂತೆ ಅಂಗಲಾಚಿರುವುದಾಗಿ ವರದಿ ವಿವರಿಸಿದೆ.
ತೀವ್ರವಾಗಿ ಉಸಿರಾಟದಿಂದ ಬಳಲುತ್ತಿದ್ದ ಜಾಗೃತಿ ಗುಪ್ತಾ ಎಂಬ ಮಹಿಳೆ ಸರ್ಕಾರಿ ಆಸ್ಪತ್ರೆಯ ಹೊರಗೆ ಕಾರಿನೊಳಗೆ ಸುಮಾರು ಮೂರು ಗಂಟೆಗಳ ಕಾಲ ಕಾದಿರುವುದಾಗಿ ವರದಿ ತಿಳಿಸಿದೆ. ಗುಪ್ತಾ ನೋಯ್ಡಾದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಇಬ್ಬರು ಮಕ್ಕಳು ಮತ್ತು ಪತಿ ಮಧ್ಯಪ್ರದೇಶದಲ್ಲಿದ್ದಾರೆ. ಗುಪ್ತಾ ಗ್ರೇಟರ್ ನೋಯ್ಡಾದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಗುಪ್ತಾ ಅವರ ಜತೆ ಬಂದಿದ್ದ ವ್ಯಕ್ತಿ, ಆಸ್ಪತ್ರೆಯ ವೈದ್ಯರಲ್ಲಿ, ನರ್ಸ್ ಬಳಿ ಆಕ್ಸಿಜನ್, ಬೆಡ್ ಗಾಗಿ ಬೇಡಿಕೊಂಡಿದ್ದರು. ಸುಮಾರು 3.30ರ ಹೊತ್ತಿಗೆ ಆಕೆ ಕುಸಿದು ಬಿದ್ದಾಗ, ಆಸ್ಪತ್ರೆಯ ರಿಸೆಪ್ಶನ್ ಗೆ ಸುದ್ದಿ ಮುಟ್ಟಿಸಿದ್ದರು. ನಂತರ ವೈದ್ಯರು ಹೊರಗೆ ಬಂದು ಪರೀಕ್ಷಿಸಿದಾಗ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆಂದು ಪ್ರತ್ಯಕ್ಷದರ್ಶಿ ಸಚಿನ್ ಎನ್ ಡಿಟಿವಿಗೆ ತಿಳಿಸಿದ್ದಾರೆ.