ಹೊಸಕೋಟೆ: ಪಟ್ಟಣದ ವಿನಾಯಕನಗರದಲ್ಲಿ ಶಾರದಾ (27) ಎಂಬ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಶಾರದಾ ಅವರ ಸಾವು ಡೆಂಗಿಯಿಂದ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಯೋಗ ಶಿಕ್ಷಕ ಅಂನುಕುಮಾರ್ ಎಂಬುವರ ಪತ್ನಿಯಾದ ಶಾರಾದಾ ಅವರು, ಸೋಮವಾರ ತೀವ್ರ ಜ್ವರದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿದ್ದರು.
ಮಂಗಳವಾರ ರಕ್ತದಲ್ಲಿ ಪ್ಲೇಟ್‌ಲೆಟ್ಸ್ ಕಡಿಮೆಯಾದ ಕಾರಣ ಬೆಂಗಳೂರಿನ ಜೆ.ಪಿ.ನಗರದ ರಾಜಶೇಖರ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಾರದಾ ಅವರು ಬುಧವಾರ ಮೃತಪಟ್ಟಿದ್ದಾರೆ. ಮೃತರಿಗೆ 4 ವರ್ಷ ಹಾಗೂ 8 ತಿಂಗಳಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡೆಂಗೆ ಜ್ವರ ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹಲವು ದಾಖಲಾಗಿದ್ದಾರೆ. ಒಂದು ವಾರದ ಹಿಂದೆ ಸುರಿದ ಮಳೆಯೇ ಈ ಬೆಳವಣಿಗೆ ಪ್ರಮುಖ ಕಾರಣ.
ಮಳೆ ನೀರು ನಿಂತಿರುವುದರಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿ ಜನರು ಡೆಂಗಿ ಜ್ವರಕ್ಕೆ ಒಳಗಾಗುತ್ತಿದ್ದಾರೆ ಎಂದು ಶ್ರೀನಿವಾಸ ಆಸ್ಪತ್ರೆಯ ಮುಖ್ಯಸ್ಥ ಡಾ. ನಾಗರಾಜ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ್, “ತಾಲೂಕಿನಲ್ಲಿ ಇದುವರೆವಿಗೂ ಡೆಂಗೆ ಜ್ವರದ ಪ್ರಕರಣಗಳು ಕಂಡುಬಂದಿಲ್ಲ.
ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಕಡಿಮೆಯಾಗುವುದನ್ನೇ ಆಧಾರವಾಗಿಟ್ಟುಕೊಂಡು ಡೆಂಗಿ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಜ್ವರಕ್ಕೆ ಒಳಗಾದವರ ರಕ್ತಪರೀಕ್ಷೆಯನ್ನು ಸರಕಾರದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಖಚಿತಪಡಿಸಿಕೊಳ್ಳಲಾಗುವುದು,’ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ: ಆನಂದ್ ತಿಳಿಸಿದ್ದಾರೆ.