ಕೋಲ್ಕತ್ತಾ: ವೈದ್ಯಕೀಯ ಚಿಕಿತ್ಸೆಗಾಗಿ ಮೇ 12 ರಂದು ಕೋಲ್ಕತ್ತಾಗೆ ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನಾರ್ ಅವರು ಕೊಲೆಯಾಗಿದ್ದಾರೆ. ಕೋಲ್ಕತ್ತಾಗೆ ಬಂದ ಕೆಲವು ದಿನಗಳ ಕಾಲ ಅವರು ಸ್ನೇಹಿತ ಗೋಪಾಲ್ ಬಿಸ್ವಾಸ್ ಅವರೊಂದಿಗೆ ವಾಸಿಸುತ್ತಿದ್ದರು. ಬಳಿಕ ಕಾಣೆಯಾಗಿದ್ದರು. ಅವರು ಕೊನೆಯದಾಗಿ ಕೋಲ್ಕತ್ತಾದ ಹೊರವಲಯದಲ್ಲಿರುವ ಉನ್ನತ-ಮಟ್ಟದ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರನ್ನು ಕೊಲೆ ಮಾಡಿ ಅವರ ದೇಹವನ್ನು ಚರ್ಮ ಸುಲಿದು, ಕತ್ತರಿಸಿ ಮತ್ತು ತುಂಡುಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ತುಂಬಿ ನಗರದಾದ್ಯಂತ ಎಸೆಯಲಾಗಿದೆ.
ಇದೀಗ ಸಂಸದ ಅನ್ವರುಲ್ ಅಜೀಂ ಅನ್ವರ್ ಕೋಲ್ಕತ್ತಾದಲ್ಲಿ ಹತ್ಯೆಯಾಗುವ ಮೊದಲು ಅವರನ್ನು ಹನಿ ಟ್ರ್ಯಾಪ್ ಮಾಡಲು ಬಳಸಿದ್ದ ಮಹಿಳೆಯನ್ನು ಢಾಕಾದಲ್ಲಿ ಬಂಧಿಸಲಾಗಿದೆ. ಶಿಲಾಂತಿ ರಹಮಾನ್ ಎಂದು ಗುರುತಿಸಲಾದ ಮಹಿಳೆ ಬಾಂಗ್ಲಾದೇಶಿ ಪ್ರಜೆ ಮತ್ತು ಪ್ರಮುಖ ಆರೋಪಿ ಅಖ್ತರುಝಾಮಾನ್ ಶಾಹಿನ್ ನ ಗೆಳತಿ ಎಂದು ಬಾಂಗ್ಲಾದೇಶ ಪೊಲೀಸ್ ಮೂಲಗಳು ತಿಳಿಸಿವೆ.
ಅಮೆರಿಕದ ಪ್ರಜೆಯಾಗಿರುವ ಅಖ್ತರುಜ್ಜಮಾನ್ ಅವರು ಅವಾಮಿ ಲೀಗ್ ಸಂಸದರ ಸ್ನೇಹಿತರಾಗಿದ್ದರು. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ಅಖ್ತರುಝಾಮಾನ್ ಅವರ ಬಾಡಿಗೆ ನಿವಾಸದಲ್ಲಿ ಸಂಸದರನ್ನು ಹತ್ಯೆ ಮಾಡಲಾಗಿದೆ.
ಅನ್ವರುಲ್ ಹತ್ಯೆಯಾದಾಗ ಶಿಲಾಂತಿ ಕೋಲ್ಕತ್ತಾದಲ್ಲಿ ಇದ್ದಳು ಮತ್ತು ಮೇ 15 ರಂದು ಮುಖ್ಯ ಶಂಕಿತ ಕೊಲೆಗಾರ ಅಮಾನುಲ್ಲಾ ಅಮನ್ ಜೊತೆಗೆ ಢಾಕಾಗೆ ಮರಳಿದಳು. ಅನ್ವರುಲ್ ನನ್ನು ಬಾಂಗ್ಲಾದೇಶದಿಂದ ಕೋಲ್ಕತ್ತಾಗೆ ಕರೆತರಲು ಶಿಲಾಂತಿಯನ್ನು ಅಖ್ತರುಜ್ಜಮಾನ್ ಹನಿ ಟ್ರ್ಯಾಪ್ ಆಗಿ ಬಳಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆಗೆ ನಿಖರ ಕಾರಣ ಯಾವುದು ಎಂದು ಪೊಲೀಸರು ಇದುವರೆಗೂ ಖಚಿತಪಡಿಸಿಲ್ಲ. ಆದರೆ ಹಣಕಾಸಿನ ವಿಚಾರದ ಗಲಾಟೆಯು ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಕೃತ್ಯದಲ್ಲಿ ಭಾಗಿಯಾದವರಿಗೆ ಅಖ್ತರುಜ್ಜಮಾನ್ ಸುಮಾರು 5 ಕೋಟಿ ರೂ ಪಾವತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (ಸಿಐಡಿ) ಮುಂಬೈನಿಂದ ಶಂಕಿತನನ್ನು ಬಂಧಿಸಿದ ನಂತರ ಪ್ರಕರಣದ ತನಿಖೆಯು ಪ್ರಗತಿ ಪಡೆಯಿತು. ಶಂಕಿತ ಆರೋಪಿ ಜಿಹಾದ್ ಹವ್ಲಾದಾರ್, ನ್ಯೂ ಟೌನ್ ಫ್ಲಾಟ್ ನಲ್ಲಿ ಇತರ ನಾಲ್ವರು ಜೊತೆಗೂಡಿ ಬಾಂಗ್ಲಾದೇಶಿ ಸಂಸದನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ವಿಚಾರಣೆಯ ಸಮಯದಲ್ಲಿ, ಅಖ್ತರುಝಾಮಾನ್ ಅವರ ಆದೇಶದ ಮೇರೆಗೆ ಕೊಲೆ ನಡೆಸಲಾಗಿದೆ ಎಂದು ಹವ್ಲಾದರ್ ಹೇಳಿದ್ದಾರೆ.