ನಂಜನಗೂಡು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಅತಿ ವೇಗವಾಗಿ ಎದುರು ಬಂದಿದ್ದರಿಂದ ಸ್ಕೂಟರ್‌ನಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಮಳೆಯ ತಲೆ ಮೇಲೆ ಬಸ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಎಂಜಿಎಸ್ ರಸ್ತೆಯ ಮಸೀದಿ ಮುಂಭಾಗ ಮಂಗಳವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ತಾಂಡವಪುರ ಗ್ರಾಮದ ಬಸವೇಗೌಡ ಎಂಬುವರ ಧರ್ಮಪತ್ನಿ ಮರಮ್ಮ(65) ಮೃತ ಮಹಿಳೆ. ಜತೆಯಲ್ಲಿದ್ದ ಮಗ ಚಂದ್ರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಎಂಜಿಎಸ್ ರಸ್ತೆಯ ಬದಿಯಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರಿಂದ ರಸ್ತೆಯಲ್ಲಿ ಬೈಕ್‌ಗಳು ನಿಲ್ಲಿಸಿದ್ದರು.
ಈ ವೇಳೆ ಮೈಸೂರು ಕಡೆಯಿಂದ ವೇಗವಾಗಿ ಬಂದ ಬಸ್ ಸಂಪೂರ್ಣವಾಗಿ ಬಲಭಾಗಕ್ಕೆ ಬಂದಿದ್ದು ಎದುರಿಗೆ ಬರುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕೆಳಗೆ ಬಿದಿದ್ದು ಹಿಂಬದಿ ಕುಳಿತಿದ್ದ ಮರಮ್ಮ ನೆಲಕ್ಕುರುಳಿದಾಗ ಬಸ್‌ನ ಚಕ್ರ ಅವರ ತಲೆಯ ಮೇಲೆ ಹರಿದು ಅವರುಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಳಿಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಇದ್ದರೂ ಸಂಚಾರಿ ನಿಯಮಗಳು ಪಾಲನೆಯಾಗುತ್ತಿಲ್ಲ. ಪರಿಣಾಮ ಇಂತಹ ದುರ್ಘಟನೆಗಳು ಮರುಕಳಿಸುತ್ತಿವೆ. ವಾಹನ ದಟ್ಟನೆ ಇರುವ ಕಡೆಯೇ ವಾಹನಗಳ ತಪಾಸಣೆ ನಡೆಸುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ಸಾಮಾನ್ಯ ತಿಳಿವಳಿಕೆ ಪೊಲೀಸರಿಗಿಲ್ಲ.
ಅವರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದರು. ಮೃತದೇಹವನ್ನು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಂತರ ಕುಟುಣವಸ್ಥರಿಗೆ ಒಪ್ಪಿಸಲಾಯಿತು. ತಾಲೂಕು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.