Advertisement

ಕೋವಿಡ್‌ನಿಂದ ಮಹಿಳೆ ಗುಣಮುಖ

01:20 PM May 30, 2020 | Suhan S |

‌ಗದಗ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜಿಮ್ಸ್‌ ವೈದ್ಯರು ಲಭ್ಯವಿರುವ ಔಷಧ ಬಳಸಿ ರೋಗಿಗಳನ್ನು ಗುಣಮಪಡಿಸುವಲ್ಲಿ ಸಫಲತೆ ಕಾಣುತ್ತಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ದೃಢಪಟ್ಟಿರುವ 35 ಪ್ರಕರಣಗಳಲ್ಲಿ 12 ಜನರು ಗುಣಮುಖರಾಗಿದ್ದಾರೆ.

Advertisement

ಕಳೆದ ಏ. 7ರಂದು ಜಿಲ್ಲೆಯಲ್ಲಿ ಮೊದಲ ಕೋವಿಡ್‌ ಪ್ರಕರಣ ಕಂಡು ಬಂದಿತ್ತು. ಈ ಪ್ರಕರಣದ ಮೂಲ ಪತ್ತೆಯಾಗುವ ಮುನ್ನವೇ 82 ವರ್ಷದ ವೃದ್ಧೆ(ಪಿ. 166) ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ನಂತರ ಒಂದಾದ ಮೇಲೊಂದು ಪ್ರಕಣಗಳು ಕಂಡು ಬರುವುದರೊಂದಿಗೆ ಕಳೆದ 15 ದಿನಗಳಿಂದೀಚೆಗೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿವೆ. ಅದರ ಬೆನ್ನಲ್ಲೇ ಜಿಮ್ಸ್‌ ವೈದ್ಯರ ಶ್ರಮದಿಂದ ಈ ವರೆಗೆ ಒಟ್ಟು 12 ಜನರು ಸೋಂಕಿನಿಂದ ಗುಣಮುಖರಾಗಿದ್ದು ಜನ ಸಾಮಾನ್ಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತಿದೆ.

ಚಿಕಿತ್ಸೆ ನೀಡುವುದೇ ಸವಾಲು: ಮಹಾಮಾರಿ ಕೋವಿಡ್ ಸೋಂಕಿಗೆ ನಿರ್ದಿಷ್ಟ ಔಷಧವಿಲ್ಲ. ಸೋಂಕಿತರಲ್ಲಿ ಕಂಡುಬರುವ ಕೆಮ್ಮು, ನೆಗಡಿ, ಜ್ವರ ಹಾಗೂ ಕಫ ಮತ್ತಿತರೆ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಪಿ. 166 ಹೊರತಾಗಿ ಈ ವರೆಗೆ ಜಿಲ್ಲೆಯ ಕೋವಿಡ್‌ ಆಸ್ಪತ್ರೆಗೆ ದಾಖಲಾದವರ ಪೈಕಿ ಬಹುತೇಕರಿಗೆ ಯಾವುದೇ ರೀತಿಯ ಗಂಭೀರವಾದ ಸಮಸ್ಯೆ ಕಂಡು ಬಂದಿಲ್ಲ. ಅಂತಹವರಿಗೆ ಚಿಕಿತ್ಸೆಗಿಂತ ನಿಗಾ ವಹಿಸುವುದೇ ದೊಡ್ಡ ಸವಾಲು. ಆದರೂ 12 ಸೋಂಕಿತರಿಗೆ ಕಂಡುಬಂದ ಸಣ್ಣಪುಟ್ಟ ಲಕ್ಷಣಗಳಿಗೆ ಔಷಧ ಒದಗಿಸುವ ಜೊತೆಗೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ “ಸಿ’ ಒದಗಿಸುವ ಮೂಲಕ ಸೋಂಕಿತರನ್ನು ಗುಣಪಡಿಸುವಲ್ಲಿ ಸಫಲರಾಗಿದ್ದಾರೆ ಎನ್ನುತ್ತಾರೆ ಜಿಮ್ಸ್‌ ಆಡಳಿತ.

9 ದಿನಗಳಲ್ಲಿ ಉಪಶಮನ!: ಕೋವಿಡ್ ಸೋಂಕಿಗೆ ಒಳಗಾಗಿದ್ದ 35 ವರ್ಷದ ಮಹಿಳೆ(ಪಿ. 1567) ಕೇವಲ 9 ದಿನಗಳಲ್ಲಿ ಗುಣಮುಖರಾಗಿ ಶುಕ್ರವಾರ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 12 ಜನರಿಗೆ ಸೋಂಕು ಉಪಶನವಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ್ದ 35 ವರ್ಷದ ಮಹಿಳೆಗೆ ಮೇ 21ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ತಕ್ಷಣ ಕೋವಿಡ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಆರಂಭಿಸಿದ್ದು, 9 ದಿನಗಳಲ್ಲಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮಹಿಳೆಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೂ ಆರೋಗ್ಯವಂತರಾಗಿದ್ದರು. ಆದರೂ 9 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಕೇಂದ್ರ ಸರಕಾರದ ಐಸಿಎಂಆರ್‌ ಪರಿಷ್ಕೃತ ಮಾರ್ಗಸೂಚಿಯಂತೆ ರೋಗಿ ದಾಖಲಾದ 7 ದಿನಗಳ ಬಳಿಕ ಮತ್ತೂಮ್ಮೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಸೋಂಕು ನೆಗೆಟಿವ್‌ ಬಂದಿದ್ದರಿಂದ ಅವರನ್ನು ಡಿಸ್ಚಾರ್ಜ್‌ ಮಾಡಲಾಗಿದೆ. -ಡಾ| ಪಿ.ಎಸ್‌.ಭೂಸರೆಡ್ಡಿ, ಜಿಮ್ಸ್‌ ನಿರ್ದೇಶಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next