ಪ್ಯಾರಿಸ್: ಚರ್ಚ್ ನೊಳಗೆ ನುಗ್ಗಿ ಮಹಿಳೆಯ ರುಂಡವನ್ನು ಕತ್ತರಿಸಿ, ಮತ್ತಿಬ್ಬರನ್ನು ಚೂರಿಯಿಂದ ಇರಿದು ಕೊಂದಿರುವ ಘಟನೆ ಫ್ರಾನ್ಸ್ ಚರ್ಚ್ ನಲ್ಲಿ ಗುರುವಾರ(ಅಕ್ಟೋಬರ್ 29, 2020) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದು, ಇದೊಂದು ಭಯೋತ್ಪಾದಕ ಕೃತ್ಯ ಎಂದು ನಗರದ ಮೇಯರ್ ಶಂಕಿಸಿದ್ದಾರೆ.
ನಗರದ ನೊಟ್ರೆ ಡೇಮ್ ಚರ್ಚ್ ನಲ್ಲಿ ಚೂರಿಯಿಂದ ವ್ಯಕ್ತಿಯೊಬ್ಬ ದಾಳಿ ನಡೆಸಿ ಮಹಿಳೆ ಸೇರಿದಂತೆ ಮೂವರನ್ನು ಹತ್ಯೆಗೈದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಮೇಯರ್ ಕ್ರಿಸ್ಟಿಯಾನ್ ಎಸ್ಟ್ರೋಸಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆಗಂತುಕನ ಆಕಸ್ಮಿಕ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಶಿರಚ್ಛೇದನ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಗೋವಾದಲ್ಲಿ ಗಗನಕ್ಕೇರಿದ ಈರುಳ್ಳಿ ದರ! ಪಡಿತರದ ಜೊತೆ ಈರುಳ್ಳಿ ನೀಡಲು ಸರಕಾರದ ಚಿಂತನೆ
ದಾಳಿ ಕುರಿತು ತನಿಖೆ ನಡೆಸುವಂತೆ ಫ್ರಾನ್ಸ್ ಭಯೋತ್ಪಾದಕ ನಿಗ್ರಹ ಪ್ರಾಸಿಕ್ಯೂಟರ್ ಡಿಪಾರ್ಟ್ ಮೆಂಟ್ ತಿಳಿಸಿದೆ. ರಾಯಿಟರ್ಸ್ ವರದಿ ಪ್ರಕಾರ, ಚರ್ಚ್ ಸುತ್ತಮುತ್ತ ಅತ್ಯಾಧುನಿಕ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದೆ. ಸ್ಥಳಕ್ಕೆ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳ ಕೂಡಾ ದೌಡಾಯಿಸಿರುವುದಾಗಿ ವರದಿ ತಿಳಿಸಿದೆ.