ಬೆಂಗಳೂರು: ಕಸ್ತೂರಿ ನಗರದ ಕವಿತಾ ಎಂಬಾಕೆಯ ಕತ್ತುಕೊಯ್ದು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಿರೀಶ್ (20), ಆಶಿಷ್ ಕುಮಾರ್ (21) ಹಾಗೂ ಅಶೋಕ (24) ಬಂಧಿತರು.
ಮೃತ ಕವಿತಾ ಹಾಗೂ ಆಕೆಯ ಗಂಡ ಶಿವರಾಮ್‌ಗೆ ಪರಿಚಯವಿರುವ ಮೂವರು ಆರೋಪಿಗಳು, ಮಾರ್ಚ್ 1ರಂದು ಕವಿತಾ ಮನೆಯಲ್ಲಿ ಯಾರು ಇಲ್ಲದಿದ್ದಾಗ ಮನೆಗೆ ತೆರಳಿ ಕವಿತಾ ಅವರನ್ನು ಕತ್ತುಕೊಯ್ದು ಕೊಲೆಗೈದು, ಆಭರಣ ಹಾಗೂ 1.40 ಲಕ್ಷ ರೂ. ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.
ಮೂಲತಃ ಚಾಮರಾಜನಗರದ ಬೆಳಕವಾಡಿ ಗ್ರಾಮದ ಶಿವರಾಮ್‌ಗೆ ಒಂದೇ ಗ್ರಾಮದವರು ಎಂಬ ಕಾರಣಕ್ಕೆ ಗಿರೀಶ್ ಮತ್ತು ಅಶೋಕ್ ಪರಿಚಯವಿತ್ತು. ಹೀಗಾಗಿ ಕೊಲೆ ನಡೆಯುವ 15 ದಿನಗಳ ಹಿಂದೆ ಬೆಳಕವಾಡಿ ಮಾರಮ್ಮ ಜಾತ್ರೆಗೆ ಶಿವರಾಮ್ ಮತ್ತು ಕವಿತಾ ದಂಪತಿ ಮಕ್ಕಳೊಂದಿಗೆ ಬಂದಿದ್ದರು. ಈ ವೇಳೆ ಕವಿತಾ ಮೈ ತುಂಬಾ ಚಿನ್ನಾಭರಣ ಧರಿಸಿದ್ದನ್ನು ನೋಡಿದ್ದ ಗಿರೀಶ್ ಆಭರಣ ಲಪಟಾಯಿಸಲು ಸಂಚು ರೂಪಿಸಿದ್ದ.
ಹಲವು ಪ್ರಕರಣದಲ್ಲಿ ಬಾಗಿಯಾಗಿದ್ದ ಬಾಗಲಕೋಟೆ ಮೂಲದ ಆಶೀಷ್ ಜೊತೆ ಸೇರಿ ಕವಿತಾರನ್ನು ಕೊಲೆಗೈಯುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ, ಶಿವರಾಮ್ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಆರೋಪಿಗಳು, ಮಾರ್ಚ್ 1ರಂದು ಶಿವರಾಮ್ ಕೆಲಸಕ್ಕೆ ಹಾಗೂ ಇಬ್ಬರೂ ಮಕ್ಕಳೂ ಶಾಲೆಗೆ ತೆರಳಿದ ಬಳಿಕ ಮನೆಯ ಹತ್ತಿರ 9 ಗಂಟೆ ಸುಮಾರಿಗೆ ಬಂದಿದ್ದರು.
ಆರೋಪಿ ಗಿರೀಶ್ ಪರಿಚಯಿದ್ದರಿಂದ ಕವಿತಾ ಬಾಗಿಲು ತೆರೆಯುತ್ತಿದ್ದಂತೆ ಮೂವರು ಒಳನುಗ್ಗಿ ಡೋರ್ ಲಾಕ್ ಮಾಡಿ ಆಕೆಯ ಕತ್ತುಕೊಯ್ದು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದೋಚಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾಗ ಅನುಮಾನದ ಮೇರೆಗೆ ಆರೋಪಿಗಳ ಕಾಲ್ ಡಿಟೈಲ್ಸ್ ಪರಿಶೀಲಿಸಿದಾಗ ಅತಿಹೆಚ್ಚು ಬಾರಿ ಮಾತನಾಡಿರುವುದು ಕಂಡು ಬಂದಿತ್ತು. ಹೀಗಾಗಿ ಅಶೋಕ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಹೊರಬಂದಿದೆ ಎಂದು ಪೊಲೀಸರು ತಿಳಿಸಿದರು.
ತಂದೆ ಬಂದರೂ ಕೊಲೆಬಗ್ಗೆ ಗೊತ್ತಾಗಿರಲಿಲ್ಲ!: ಪಕ್ಕದ ರಸ್ತೆಯಲ್ಲಿ ವಾಸವಿರುವ ಕವಿತಾ ತಂದೆ ಶಿವಪ್ಪ, ತಿಂಡಿ ಸೇವಿಸುವ ಸಲುವಾಗಿ ಬೆಳಿಗ್ಗೆ ಕೊಲೆ ನಡೆದ ದಿನ ಬೆಳಿಗ್ಗೆ 9-15ರ ಸುಮಾರಿಗೆ ಕವಿತಾ ಅವರ ಮನೆಯ ಹತ್ತಿರ ಬಂದಿದ್ದರು. ಆದರೆ, ಆರೋಪಿಗಳು ಮನೆಯ ಒಳಗಡೆಯಿಂದ ಡೋರ್‌ಲಾಕ್ ಮಾಡಿದ್ದರಿಂದ, ಮಗಳು ಸ್ನಾನಕ್ಕೆ ಹೋಗಿರಬಹುದು ಎಂದುಕೊಂಡು ಸಮೀಪದಲ್ಲಿಯೇ ಅದೇ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಸಂಬಂಧಿಕರಾದ ಮಂಗಳಗೌರಿ ಎಂಬುವವರ ನಿವಾಸಕ್ಕೆ ತೆರಳಿದ್ದರು. ಇದಾದ ಒಂದು ಗಂಟೆ ಬಳಿಕ ಬಳಿಕ ಮಗಳ ಮನೆಯ ಬಳಿ ಬಂದು, ಬಾಗಿಲು ತೆರೆದೇ ಇದ್ದಿದ್ದರಿಂದ ಮನೆಯೊಳಗಡೆ ಹೋಗಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿತ್ತು.