ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಿಯಕರನ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಅಸಮಾಧಾನಗೊಂಡು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪ್ರಿಯಕರ ರವಿಕಿರಣ್‌ನನ್ನು ಕೊನೆಗೂ ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರವಿಕಿರಣ್ ವಿರುದ್ಧ ಸಂತ್ರಸ್ತೆ ಮಂಜುಳಾ ವಂಚನೆ, ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ಮತ್ತೂಂದೆಡೆ ಪೊಲೀಸರು ಕೂಡ ರಾಜಕೀಯ ಪ್ರಭಾವಕ್ಕೊಳಗಾಗಿ ಪ್ರಕರಣ ದಾಖಲಿಸಿ ಒಂದು ವಾರವಾದರೂ ಆರೋಪಿಯನ್ನು ಬಂಧಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಇದರಿಂದ ನೊಂದಿದ್ದ ಮಂಜುಳಾ ಶುಕ್ರವಾರ ಮಧ್ಯಾಹ್ನ ಪೊಲೀಸರ ಕ್ರಮದ ಬಗ್ಗೆ ಅಸಮಾಧಾನಗೊಂಡ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ಮಂಜುಳಾ ಪೋಷಕರು ಸಹ ಆರೋಪಿಯ ಬಂಧನದ ಬಳಿಕವಷ್ಟೇ ಮೃತ ದೇಹವನ್ನು ಕೊಂಡೊಯ್ಯುವುದಾಗಿ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಆರೋಪಿಗಾಗಿ ತೀವ್ರ ಶೋಧ ನಡೆಸಿದ ಪೊಲೀಸರು ಕುಣಿಗಲ್‌ನಲ್ಲಿ ತಲೆಮರೆಸಿಕೊಂಡಿದ್ದ ರವಿಕಿರಣ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಬಂಧನದ ಖಚಿತ ಮಾಹಿತಿ ಪಡೆದ ನಂತರವೇ ಮೃತದೇಹ ವಶಕ್ಕೆ ಪಡೆದ ಮಂಜುಳಾ ಪೋಷಕರು, ಅಂತ್ಯಕ್ರಿಯೆಗೆ ಮಾಗಡಿಗೆ ಕೊಂಡೊಯ್ದಿದ್ದಾರೆ. ಮಾಗಡಿ ಮೂಲದ ಮಂಜುಳಾ ರಾಜರಾಜೇಶ್ವರನಗರದ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಭೈರವೇಶ್ವರನಗರದ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದರು.
ಸಂಬಂಧಿಯನ್ನು ವಿವಾಹವಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ಪಡೆದ ಮಂಜುಳಾಗೆ ಖಾಸಗಿ ಕಂಪನಿ ಉದ್ಯೋಗಿ ರವಿಕಿರಣ್ ಪರಿಚಯವಾಗಿದ್ದು, ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಆಗುವುದಾಗಿ ನಂಬಿಸಿದ ರವಿಕಿರಣ್, ಕಡೆಗೆ ಮುದುವೆಗೆ ಮನೆಯವರು ಒಪ್ಪುತ್ತಿಲ್ಲ ಎಂದು ದೂರ ಮಾಡಿದ್ದ. ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದರು.
ಪ್ರತಿಭಟನೆ: ಮಂಜುಳಾ ಸಾವಿಗೆ ಕಾರಣವಾದ ರವಿಕಿರಣ್‌ನನ್ನು ಶವಾಗಾರದ ಬಳಿ ಕರೆಸಬೇಕು ಎಂದು ಒತ್ತಾಯಿಸಿ ಶನಿವಾರ ಬೆಳಗ್ಗೆ ಮೃತಳ ಪೋಷಕರು ಮರಣೋತ್ತರ ಪರೀಕ್ಷೆ ಬಳಿಕವೂ ಮೃತದೇಹವನ್ನು ಪಡೆಯಲು ನಿರಾಕರಿಸಿದರು. ಬಳಿಕ ಪ್ರತಿಭಟನೆ ವಿಚಾರ ತಿಳಿದು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ ರಾಜ್ಯ ಮಹಿಳಾ ಆಯೋಗದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿರುವುದನ್ನು ಖಚಿತಪಡಿಸಿದರು. ಜತೆಗೆ ಮೃತಳ ಹಿರಿಯ ಸಹೋದರ ಹಾಗೂ ಸಂಬಂಧಿಯನ್ನು ಚಂದ್ರಲೇಔಟ್ ಠಾಣೆಗೆ ಕರೆದೊಯ್ದು ರವಿಕಿರಣನನ್ನು ತೋರಿಸಲಾಯಿತು.