ಬೆಂಗಳೂರು: ಆ್ಯಪ್ ಮೂಲಕ ಬುಕ್ ಮಾಡಿದ್ದ ರೈಡ್ ಅನ್ನು ಕ್ಯಾನ್ಸಲ್ ಮಾಡಿದ ನಂತರ ಆಟೋ ಚಾಲಕನೊಬ್ಬ ಕಿರುಕುಳ ನೀಡಿ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ನಾನು ಮತ್ತು ನನ್ನ ಸ್ನೇಹಿತೆ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದ್ದು ಬುಧವಾರ(ಸೆ4) ರಂದು ಘಟನೆ ಸಂಭವಿಸಿದೆ ಎಂದು ಮಹಿಳೆ ಎಕ್ಸ್’ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ ರೈಡ್-ಹೇಲಿಂಗ್ ಕಂಪನಿಯನ್ನು ತತ್ ಕ್ಷಣ ಕ್ರಮಕ್ಕೆ ಒತ್ತಾಯಿಸಿ ಟ್ಯಾಗ್ ಮಾಡಿದ್ದರು.
‘ಈ ಕುರಿತು ಓಲಾ(Ola Support) ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ”ಇದು ಸಾಕಷ್ಟು ಆತಂಕಕಾರಿಯಾಗಿದೆ. ಚಿಂತಿಸಬೇಡಿ, ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ”ಎಂದು ಹೇಳಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಭರವಸೆ ನೀಡಿದ್ದಾರೆ.’ಇಂತಹ ನಡವಳಿಕೆಯನ್ನು ಸ್ವೀಕಾರಾರ್ಹವಲ್ಲ. ಇಂತಹ ಕೆಲವು ಜನರು ಆಟೋ ಚಾಲಕರ ಸಮುದಾಯಕ್ಕೆ ಕೆಟ್ಟ ಹೆಸರನ್ನು ತರುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದರು. ಅದರಂತೆ ಚಾಲಕನನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.
“ ಪೀಕ್ ಅವರ್‌ನ ಕಾರಣ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದೆವು. ನಾನು ಮೊದಲು ಬಂದಿದ್ದೆ, ಆದ್ದರಿಂದ ಅವಳು ಒಂದನ್ನು ರದ್ದುಗೊಳಿಸಿದಳು. ಮತ್ತೊಬ್ಬ ಆಟೋ ಡ್ರೈವರ್ ಕೋಪದಿಂದ ನಮ್ಮನ್ನು ಹಿಂಬಾಲಿಸಿದ. ಪರಿಸ್ಥಿತಿಯನ್ನು ವಿವರಿಸಿದರೂ, ಕಿರುಚಾಡಿ ನಿಂದನೆಯನ್ನು ಪ್ರಾರಂಭಿಸಿದ ”ಎಂದು ಮಹಿಳೆ ಆರೋಪಿಸಿದ್ದಾರೆ.
“ಆಟೋ ನಿನ್ನ ತಂದೆಗೆ ಸೇರಿದ್ದಾ ಎಂದು ಪ್ರಶ್ನಿಸಿ ಅವಹೇಳನಕಾರಿ ಮಾತನಾಡುತ್ತಾ ಚಾಲಕ ನಮ್ಮ ಮೇಲೆ ಹಲ್ಲೆ ನಡೆಸಿದ. ನಾನು ರೆಕಾರ್ಡಿಂಗ್ ಮಾಡಲು ಪ್ರಾರಂಭಿಸಿದೆ, ಅದು ಅವನನ್ನು ಮತ್ತಷ್ಟು ಕೆರಳಿಸಿತು. ನಾನು ವಿಡಿಯೋ ಬಹಿರಂಗ ಮಾಡುವುದನ್ನು ಪ್ರಸ್ತಾಪಿಸಿದಾಗ, ನನಗೆ ಸವಾಲು ಹಾಕಿದ, ನಾನು ಭಯ ಪಡಲಿಲ್ಲ” ಎಂದು ಮಹಿಳೆ ಆರೋಪಿಸಿದ್ದಾರೆ.