ದರ್ಶನ್ ಅಭಿನಯದ “ಯಜಮಾನ’ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಅದಾದ ಬಳಿಕ ಎಂ.ಡಿ.ಶ್ರೀಧರ್ ನಿರ್ದೇಶನದ “ಒಡೆಯರ್’ ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. “ಒಡೆಯರ್’ ಚಿತ್ರ ದರ್ಶನ್ ಅಭಿನಯದ 52 ನೇ ಸಿನಿಮಾ ಎಂಬುದು ವಿಶೇಷ. ಆಗಸ್ಟ್ 16 ರಂದು ಮೈಸೂರಿನಲ್ಲಿ “ಒಡೆಯರ್’ಗೆ ಅದ್ಧೂರಿ ಮುಹೂರ್ತ ನೆರವೇರಲಿದ್ದು, ಸೆಪ್ಟೆಂಬರ್‌ನಿಂದ ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆ.
ಇದು ತೆಲುಗಿನ “ವೀರಂ’ ಚಿತ್ರದ ಅವತರಣಿಕೆ. ಕನ್ನಡಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುವ ನಿರ್ದೇಶಕ ಎಂ.ಡಿ.ಶ್ರೀಧರ್, ಇದೀಗ ಸ್ಕ್ರಿಪ್ಟ್ ಕೆಲಸವನ್ನು ಪೂರ್ಣಗೊಳಿಸಿ, ಒಂದಷ್ಟು ಅಂತಿಮ ಸ್ಪರ್ಶದಲ್ಲಿದ್ದಾರೆ. ಚಿತ್ರಕ್ಕಿನ್ನೂ ನಾಯಕಿಯ ಆಯ್ಕೆಯಾಗಿಲ್ಲ. ದರ್ಶನ್‌ಗೆ ಸರಿಯಾದ ನಾಯಕಿಯ ಹುಡುಕಾಟದಲ್ಲಿ ನಿರ್ದೇಶಕರು ಬಿಜಿಯಾಗಿದ್ದು, ಆದಷ್ಟು ಕನ್ನಡದ ನಾಯಕಿಯನ್ನೇ ಆಯ್ಕೆ ಮಾಡಲು ಜೋರು ಹುಡುಕಾಟ ನಡೆಸಿದ್ದಾರೆ.
ಈಗಾಗಲೇ ಕೆಲ ಪಾತ್ರಗಳಿಗೆ ಉಳಿದ ಕಲಾವಿದರ ಜೊತೆ ಮಾತನಾಡಿರುವ ನಿರ್ದೇಶಕರು, ಇಷ್ಟರಲ್ಲೇ ದೊಡ್ಡ ತಾರಾಬಳಗದ ಆಯ್ಕೆಯನ್ನೂ ಅಂತಿಮಗೊಳಿಸಲಿದ್ದಾರೆ. ಇನ್ನು, ನಿರ್ದೇಶಕ ಎಂ.ಡಿ.ಶ್ರೀಧರ್ ಅವರು ಈ ಹಿಂದೆ ದರ್ಶನ್ ಅಭಿನಯದಲ್ಲಿ “ಪೊರ್ಕಿ’ ಮತ್ತು “ಬುಲ್ ಬುಲ್’ ಚಿತ್ರವನ್ನು ನಿರ್ದೇಶಿಸಿದ್ದರು. ಆ ಎರಡು ಚಿತ್ರಗಳು ಭರ್ಜರಿ ಯಶಸ್ಸು ಪಡೆದಿದ್ದವು.
ಈಗ ನಿರ್ದೇಶನದ ಮೂರನೇ ಚಿತ್ರ “ಒಡೆಯರ್’ಗೆ ತಯಾರಿ ನಡೆಸಿರುವ ಎಂ.ಡಿ.ಶ್ರಿಧರ್, “ಹ್ಯಾಟ್ರಿಕ್’ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಸೆಪ್ಟೆಂಬರ್‌ನಿಂದ “ಒಡೆಯರ್‌ಗೆ’ ಚಾಲನೆ ಸಿಗುತ್ತಿದ್ದು, ಮೊದಲ ಹಂತದಲ್ಲಿ 40 ದಿನಗಳ ಕಾಲ ಮೈಸೂರು, ಬೆಂಗಳೂರು, ಹೈದರಾಬಾದ್ ಸುತ್ತಮುತ್ತ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದಾರೆ. ಎಂದಿನಂತೆ, ಶ್ರೀಧರ್ ಚಿತ್ರದಲ್ಲಿ ಕೃಷ್ಣಕುಮಾರ್ (ಕೆಕೆ) ಛಾಯಾಗ್ರಹಣ ಮಾಡಿದರೆ, ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದಾರೆ.
ಕೆ.ಎಂ.ಪ್ರಕಾಶ್ ಅವರು ಸಂಕಲನ ಮಾಡಲಿದ್ದಾರೆ. ಸಂದೇಶ್ ನಾಗರಾಜ್ “ಒಡೆಯರ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ನಡುವೆಯೇ ದರ್ಶನ್ ಅವರ 53ನೇ ಚಿತ್ರದ ಟೈಟಲ್ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ “ರಾಬರ್ಟ್’ ಎಂದು ಟೈಟಲ್ ಇಡಲಾಗಿದೆ ಎಂಬ ಸುದ್ದಿಯೂ ಓಡಾಡುತ್ತಿದೆ.
“ಚೌಕ’ ಚಿತ್ರದಲ್ಲಿ ದರ್ಶನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು, ಅದರಲ್ಲಿ ಅವರ ಪಾತ್ರ ರಾಬರ್ಟ್ ಎಂದಿತ್ತು. ಹಾಗಾಗಿ ಅದೇ ಟೈಟಲ್ ಇಡಲಾಗಿದೆ ಎಂಬ ಸುದ್ದಿಯೂ ಇದೆ. ಜೊತೆಗೆ “ಕಾಟೇರ’ ಟೈಟಲ್ ಕೂಡಾ ಓಡಾಡುತ್ತಿದೆ. ಆದರೆ, ತರುಣ್ ಸುಧೀರ್ ಮಾತ್ರ ಚಿತ್ರಕ್ಕೆ ಯಾವುದೇ ಟೈಟಲ್ ಅಂತಿಮವಾಗಿಲ್ಲ. ಆದರೆ, ಒಂದಷ್ಟು ಶೀರ್ಷಿಕೆಗಳನ್ನ ನೋಂದಣಿ ಮಾಡಿಸಿದ್ದೇವೆ ಎನ್ನುವ ಮೂಲಕ 53ನೇ ಚಿತ್ರದ ಟೈಟಲ್ ಚರ್ಚೆಗೆ ತೆರೆ ಎಳೆದಿದ್ದಾರೆ.