ಮೈಸೂರು: ಅರಮನೆಯ ದಕ್ಷಿಣ ದ್ವಾರದ ಸಮೀಪವಿರುವ ಗನ್‌ಹೌಸ್ ವೃತ್ತದಲ್ಲಿ ರಾಜವಂಶಸ್ಥ ದಿ. ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಅರಮನೆ ಉಳಿಸಿ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ನ್ಯಾಯಾಲಯ ಮುಂಭಾಗ ಗಾಂಧಿಪ್ರತಿಮೆ ಬಳಿ ಸೇರಿದ ಪ್ರತಿಭಟನಾಕಾರರು, ಐತಿಹಾಸಿಕ ಮಹತ್ವ ಹೊಂದಿರುವ ಅರಮನೆ ದ್ವಾರಗಳಲ್ಲಿ ಮೈಸೂರು ಸಂಸ್ಥಾನವನ್ನು ಆಳಿದ ಅರಸರ ಪ್ರತಿಮೆ ಇದೆ. ಹೀಗಾಗಿ ಗನ್‌ಹೌಸ್ ವೃತ್ತದ ಅರಮನೆ ದ್ವಾರದಲ್ಲಿ ರಾಜಮನೆತನದವರ ಪ್ರತಿಮೆ ನಿರ್ಮಿಸಬೇಕಿದ್ದು, ಈ ನಿಟ್ಟಿನಲ್ಲಿ ಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ಒಡೆಯರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದರು. ಆದರೆ ಇದೀಗ ಈ ಜಾಗದಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪುತ್ಥಳಿ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ.
ಅಂದು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಮುಖ್ಯಮಂತ್ರಿಗಳು ಇಂದು ಶಿಲಾನ್ಯಾಸ ಮಾಡುತ್ತಿರುವುದು ಖಂಡನೀಯ. ಸ್ವಾಮೀಜಿ ಅವರ ಬಗ್ಗೆ ಅಪರ ಗೌರವವಿದ್ದು, ಅವರ ಪ್ರತಿಮೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬೇರೆ ಜಾಗದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕು, ಈ ಪ್ರತಿಮೆ ನಿರ್ಮಾಣ ಶಿಲಾನ್ಯಾಸ ಕೈಬಿಡಬೇಕೆಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಎಂ.ರಾಮೇಗೌಡ, ಸಂಚಾಲಕ ನಂದೀಶ್ ಜಿ ಅರಸ್, ಸೋಸಲೆ ಸಿದ್ದರಾಜು, ರೈತ ಮುಖಂಡ ಆಶ್ವಥ್ ನಾರಾಯಣ ರಾಜೇ ಅರಸ್, ಟಿ.ಕೆ.ಸುಬ್ರಹ್ಮಣ್ಯಂ ಅರಸ್, ಮಧುವನ ಚಂದ್ರು, ಪ್ರಕಾಶ್ ರಾಜೇ ಅರಸ್, ಚಿನ್ನಕೃಷ್ಣರಾಜ ಇತರರು ಪ್ರತಿಭಟನೆಯಲ್ಲಿದ್ದರು.