Advertisement
ಜಯಚಾಮರಾಜ ಒಡೆಯರ್ ಶತಮಾನೋತ್ಸವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘವು ಈ ಬಾರಿಯ ಜಯಚಾಮರಾಜ ಒಡೆಯರ್ ಅವರ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ನಡೆಸಲು ಮುಂದಾಗಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ 210ನೇ ಫಲಪುಷ್ಟ ಪ್ರದರ್ಶನವು ಆ.9ರಿಂದ 18ವರೆಗೆ ನಡೆಯಲಿದೆ. ಈಗಾಗಲೇ ಲಾಲ್‌ಬಾಗ್‌ನಲ್ಲಿ ಕಲಾವಿದರ ತಂಡ ಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಿದ್ದು, ಪ್ರದರ್ಶನಕ್ಕೆ ಅಗತ್ಯವಿರುವ ಹೂವಿನ ಪ್ರತಿಕೃತಿಗಳ ಚೌಕಟ್ಟುಗಳನ್ನು ತಯಾರಿಸುತ್ತಿದ್ದಾರೆ.
Related Articles
Advertisement
ಮೈಸೂರು ಸಂಸ್ಥಾನದ ದರ್ಬಾರ್: ಒಡೆಯರು ಎಂದ ಮೇಲೆ ಮೈಸೂರು ಅರಮನೆ, ಅಲ್ಲಿನ ದರ್ಬಾರ್ ಇರಲೇಬೇಕು. ಹೀಗಾಗಿ ಗಾಜಿನ ಮನೆ ಹಿಂಭಾಗದಲ್ಲಿ ಹೂವುಗಳಿಂದಲೇ ಮೈಸೂರು ಸಂಸ್ಥಾನದ ದರ್ಬಾರ್ ಸನ್ನಿವೇಷವನ್ನು ಮರು ಸೃಷ್ಟಿ ಮಾಡಲಾಗುತ್ತಿದೆ. ಇಲ್ಲಿ ಸಿಂಹಾಸನ, ಎರಡು ಆನೆಗಳು, ಸೇನಾಧಿಪತಿ, ಐದಾರು ಮಂದಿ ಸೈನಿಕರ ಪ್ರತಿಕೃತಿ ನಿರ್ಮಿಸಲಾಗುತ್ತಿದೆ.
ಸಂಗೀತ ವಾದ್ಯಗಳು: ಜಯಚಾಮರಾಜ ಒಡೆಯರು ಆಡಳಿತದ ಜತೆಗೆ ಶ್ರೇಷ್ಠ ಸಂಗೀತ ಕಲಾವಿದರು, ಕಲಾ ಸೇವಕರಾಗಿದ್ದು, ಸಂಗೀತ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕರ್ನಾಟಕ, ಹಿಂದೂಸ್ತಾನಿ ಹಾಗೂ ಪಾಶ್ಚಾತ್ಯ ಸಂಗೀತ ಪ್ರಕಾರಗಳಲ್ಲಿ ಅವರು ಆಳವಾದ ಜ್ಞಾನ ಪಡೆದಿದ್ದರು. ಹೀಗಾಗಿ, ಗಾಜಿನ ಮನೆಯ ಎಡಭಾಗದಲ್ಲಿ ದೊಡ್ಡ ಗಾತ್ರದಲ್ಲಿ ವೀಣೆ, ಸಿತಾರ್, ತಬಲ ಸೇರಿ ವಿವಿಧ ಸಂಗೀತ ವಾದ್ಯಗಳ ಮಾದರಿಯನ್ನು ಹೂವುಗಳಿಂದ ಸಿದ್ಧಪಡಿಸಲಾಗುತ್ತಿದೆ. ಜತೆಗೆ ಪ್ರದರ್ಶನ ಸಂದರ್ಭದಲ್ಲಿ ನಿತ್ಯ ಗಾಜಿನ ಮನೆ ಮುಂಭಾಗದ ಬ್ಯಾಂಡ್ ಸ್ಟಾಂಡ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಸಾಧನೆಗಳ ಕುರಿತು ಮಾಹಿತಿ: ಜಯಚಾಮರಾಜ ಒಡೆಯರ್ ಸಾಧನೆಗಳ ಮಾಹಿತಿ ಕುರಿತು ಪ್ರದರ್ಶನದಲ್ಲಿ ಬೆಳಕು ಚಲ್ಲಲಾಗುತ್ತಿದೆ. ಈಗಾಗಲೇ ಇತಿಹಾಸ ತಜ್ಞರು ಹಾಗೂ ಅರಮನೆಯಿಂದ ಮಾಹಿತಿ ಕಲೆಹಾಕಲಾಗಿದೆ. ಕೂಲಿಕಾರ್ಮಿಕರಿಗೆ ವಿಮೆ ಜಾರಿ, ಮಹಿಳಾ ವೈದ್ಯರ ನೇಮಕ, ಉನ್ನತ ಶಿಕ್ಷಣಕ್ಕೆ ಆದ್ಯತೆ, ಕರ್ನಾಟಕ ಏಕೀಕರಣ ಹೋರಾಟ, ಆಕಾಶವಾಣಿ, ಎಚ್‌ಎಎಲ್ ನಿರ್ಮಾಣಕ್ಕೆ ಸಹಕಾರ ಸೇರಿದಂತೆ ವಿವಿಧ ಕೊಡುಗೆ ಬಗ್ಗೆ ಹೂವುಗಳು ಚಿತ್ರಾಕೃತಿ, ಛಾಯಾಚಿತ್ರ, ಫಲಕಗಳನ್ನು ಆಳವಡಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ಜಯಚಾಮರಾಜ ಒಡೆಯರ್ ನಾಡಿನ ಹೆಮ್ಮೆ. ಅವರ ಜೀವನ ಕುರಿತು ಈ ಬಾರಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುತ್ತಿರುವುದು ಸಂತಸದ ವಿಚಾರ. ಸರ್ಕಾರದ ವಿವಿಧ ಇಲಾಖೆಗಳಿಗೆ ಅವರು ನೀಡಿರುವ ಕೊಡುಗೆಗಳನ್ನು ಪ್ರದರ್ಶನದಲ್ಲಿ ಪರಿಚಯಿಸುವ ಕೆಲಸವಾಗಬೇಕು.-ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗ ಅರಸ್, ಜಯಚಾಮರಾಜ ಒಡೆಯರ್ ಮೊಮ್ಮಗ ಜಯಚಾಮರಾಜ ಒಡೆಯರ್ ಶತಮಾನೋತ್ಸವದ ಅಂಗವಾಗಿ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನದಲ್ಲಿ ಅವರ ಸಾಧನೆ ಕೊಡುಗೆ ತೆರೆದಿಡುವ ಪ್ರಯತ್ನ ಮಾಡಲಾಗುತ್ತಿದೆ. ದರ್ಬಾರ್ ಸಭಾಂಗಣ, ಜಯಚಾಮರಾಜ ವೃತ್ತದ ಪ್ರತಿಕೃತಿ ತಯಾರಿ ಆರಂಭಗೊಂಡಿದೆ.
-ಡಾ.ಎಂ.ಜಗದೀಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು * ಜಯಪ್ರಕಾಶ್ ಬಿರಾದಾರ್