ಹರಪನಹಳ್ಳಿ: ಅಂತರ್ಜಲ ಕುಸಿತದಿಂದ ನೀರು ಇಂಗಿ ಹೋದ ಹಿನ್ನೆಲೆಯಲ್ಲಿ ತಾಲೂಕಿನ ಅಲಮರಸೀಕೆರೆ ಗ್ರಾಮದ ಕೆರೆಯಲ್ಲಿ ಲಕ್ಷಾಂತರ ಮೀನುಗಳು ಸತ್ತಿದ್ದು, ಇದರಿಂದ ಹೊರಸೂಸುವ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಜನರನ್ನು ಕಾಡುತ್ತಿದೆ. ಕಳೆದ ಒಂದು ವಾರದಿಂದ ಅಲಮರಸೀಕೆರೆ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಮೀನು ಸಾಯುತ್ತಿವೆ.
ಇದರಿಂದ ಗ್ರಾಮದ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದರೆ ಅಂಗನವಾಡಿ ಮಕ್ಕಳಿಗೆ ಪಾಠ ಹೇಳಿಕೊಡವುದು ಕೂಡ ಕಷ್ಟವಾಗಿದೆ. ತಾಲೂಕಿನಲ್ಲಿಯೇ ಅತಿ ಹೆಚ್ಚು ದೊಡ್ಡದಾದ ಕೆರೆಗಳಲ್ಲಿ ಅಲಮರಸೀಕೆರೆಯೂ ಒಂದಾಗಿದೆ. ಸುಮಾರು 300 ಎಕರೆ ವಿಸ್ತೀರ್ಣ ಹೊಂದಿದ್ದು, ಕಳೆದ ಎರಡು ವರ್ಷಗಳಿಂದ ಸತತವಾಗಿ ವರುಣ ಕೈಕೊಟ್ಟ ಪರಿಣಾಮ ಬರ ಅವರಿಸಿದೆ.
ಇದರಿಂದ ತಾಲೂಕಿನ ಬಹುತೇಕ ಎಲ್ಲ ಕೆರೆಗಳು ಒಣಗಿ ಹೋಗಿವೆ. ಆದರೆ, ಅಲಮರಸೀಕೆರೆ ದೊಡ್ಡದಿರುವುದರಿಂದ ಅಲ್ಪ-ಸ್ವಲ್ಪ ಮಾತ್ರ ನೀರು ಉಳಿದುಕೊಂಡಿದೆ. ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ಉಳಿದ ಅಲ್ಪ ನೀರು ಕೂಡ ಬತ್ತಿ ಹೋಗುತ್ತುದೆ. ಹೀಗಾಗಿಯೇ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸಾವನ್ನುಪ್ಪುತ್ತಿವೆ.
ಅಲ್ಪ ಪ್ರಮಾಣದ ನೀರು ಕೂಡ ಹಚ್ಚ ಹಸಿರಿನಿಂದ ಕೂಡಿದ್ದು, ದುರ್ವಾಸನೆ ಬೀರುತ್ತಿರುವ ಪರಿಣಾಮ ಗ್ರಾಮದವರು ಕೆರೆಯ ತೂಬನ್ನು ಎತ್ತಿ ನೀರನ್ನು ಹರಿಯಲು ಬಿಟ್ಟಿದ್ದಾರೆ. ಇದರಿಂದ ಕೆರೆ ಖಾಲಿಯಾಗುತ್ತಲಿದೆ. ಆದ್ದರಿಂದ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ನೀರಿನಲ್ಲಿ ಹಾಗೂ ದಡದಲ್ಲಿ ಉದ್ದಕ್ಕೂ ಸತ್ತು ಬಿದ್ದಿವೆ.
ಇನ್ನೂ ಕೆಲವು ಮೀನುಗಳು ಸ್ವಲ್ಪ ನೀರಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂತು. ಮೀನುಗಳು ಸತ್ತಿರುವುದರಿಂದ ದುರ್ವಾಸನೆ ಪ್ರಾರಂಭವಾಗಿ ಗ್ರಾಮಸ್ಥರು ಗ್ರಾಮದಲ್ಲಿ ವಾಸ ಮಾಡುವುದೇ ದುಸ್ತರವಾಗಿದೆ. ಕಳೆದ ಒಂದು ವಾರದಿಂದ ಮೀನುಗಳು ಸಾಯುತ್ತಲಿದ್ದು, ದುರ್ವಾಸನೆ ಆರಂಭವಾಗಿದೆ.
ಶಾಲೆಯಲ್ಲಿ ಹಾಗೂ ಅಂಗನವಾಡಿಯಲ್ಲಿ ಮಕ್ಕಳು ಕುಳಿತು ಪಾಠ ಕೇಳುವುದು ಕಷ್ಟವಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ದಡಾರ, ಕಾಲರಾ ಪ್ರಾರಂಭವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮದ ರಾಜು, ನಾಗರಾಜ್, ವೈ. ಮಂಜುನಾಥ, ಟಿ. ಗೋಣೆಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.