ಶೃಂಗೇರಿ: ಶ್ರೀ ಶಾರದೆಯ ನೆಲೆವೀಡು ಶೃಂಗೇರಿಯಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಯಲು ಶಿಕ್ಷಕರಿಲ್ಲದೆ ಬೇರೆ ಐಚ್ಛಿಕ ವಿಷಯ ತೆಗೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ತಲೆದೋರಿದೆ.
ತಾಲೂಕಿನ ತೊರೆಹಡ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಿಲ್ಲದೆ ಸಂಸ್ಕೃತ ಭಾಷೆ ಕಲಿಯಲುವಿದ್ಯಾರ್ಥಿಗಳಿಗೆ ಕಷ್ಟವಾಗಿದೆ. ಇಲ್ಲಿ ಹಂಗಾಮಿಸಂಸ್ಕೃತ ಶಿಕ್ಷಕಿಯಾಗಿ ಪುಷ್ಪಾ ಹೆಗ್ಡೆ ಎಂಬುವವರು ತುಮಕೂರಿನಿಂದ ಕಳೆದ ಎರಡು ವರ್ಷದಿಂದ ಸೇವೆಸಲ್ಲಿಸುತ್ತಿದ್ದರು. ಸರ್ಕಾರ ಬೇರೆ ಶಾಲೆಯಿಂದ ಇಲ್ಲಿಗೆನಿಯೋಜನೆ ಮಾಡಿರುವುದರಿಂದ ಅಲ್ಲಿನ ಶಾಲೆಗೆ ಈಗ ನಿಯುಕ್ತಿಗೊಂಡಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಿಲ್ಲದಂತಾಗಿದೆ.
ಈ ಸಾಲಿನಲ್ಲಿ 8 ನೇ ತರಗತಿಗೆ ಸಂಸ್ಕೃತ ವಿಷಯವನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲಿನ 9 ನೇ ತರಗತಿಯಲ್ಲಿ 9 ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿದ್ದು ಇದರಲ್ಲಿ ಈಗಾಗಲೇ 4 ವಿದ್ಯಾರ್ಥಿಗಳು ತಮ್ಮ ಸ್ವ ಇಚ್ಛೆಯಿಂದ ಹಿಂದೆ ಭಾಷೆಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಈಗ ಉಳಿದಿರುವ ವಿದ್ಯಾರ್ಥಿಗಳು 5 ಮಂದಿ ಮಾತ್ರ. 10 ನೇ ತರಗತಿಯಲ್ಲಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿದ್ದು 8 ನೇ ತರಗತಿಯಿಂದಲೇ ಈ ವಿದ್ಯಾರ್ಥಿಗಳು ಸಂಸ್ಕೃತ ಐಚ್ಛಿಕ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದರು. ಸರ್ಕಾರ ಸಂಸ್ಕೃತ ಶಿಕ್ಷಕರನ್ನು ನೇಮಿಸದೇ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯನ್ನು ಕಲಿಯಲು ವಂಚಿತರಾಗುತ್ತಿದ್ದಾರೆ. ಈ ಶಾಲೆಯಲ್ಲಿ 9 ಶಿಕ್ಷಕರಿದ್ದು 5 ಶಿಕ್ಷಕರ ಕೊರತೆ ಇದೆ ಕನ್ನಡ ಭಾಷೆಗೆ ಒಬ್ಬರು ಕಲಾ ವಿಭಾಗಕ್ಕೆ ಇಬ್ಬರು ಶಿಕ್ಷಕರ ಕೊರತೆ ಇದೆ ಮತ್ತು ದೈಹಿಕ ಶಿಕ್ಷಕರ ಕೊರತೆಯೂ ಇಲ್ಲಿದೆ.
ಸಂಸ್ಕೃತ ಭಾಷೆ ಕಲಿಸಲು ಮೆಣಸೆಯಲ್ಲಿರುವ ರಾಜೀವ್ ಗಾಂಧಿ ಸಂಸ್ಕೃತ ಕಾಲೇಜಿನಿಂದ ಪ್ರಾಧ್ಯಾಪಕರು ಇಲ್ಲಿ ಹಂಗಾಮಿಯಾಗಿ ಬಂದು ಬೋಧನೆ ಮಾಡುತ್ತಿದ್ದರು. ಅವರಿಗೆ ಸರ್ಕಾರದಿಂದ ಸರಿಯಾದ ವೇತನ ಸಿಗದೆ ವಂಚಿತರಾಗಿದ್ದಾರೆ. ಶಾಲೆಯ ಆಡಳಿತ ಮಂಡಳಿಯೇ ಇವರಿಗೆ ವೇತನ ನೀಡಿ ಕರೆಸಿಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು ಉತ್ತಮ ಬೋಧನೆ, ಶಿಸ್ತುಬದ್ಧ ಶಿಕ್ಷಕರಿಂದ ಉತ್ತಮ ಫಲಿತಾಂಶ ಬರುತ್ತಿದೆ. ಆದರೆ ಶಾಲೆಗೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ಕೂಡಲೇ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಿದೆ.
ಶಾಲೆಗೆ ಸಂಸ್ಕೃತ ಶಿಕ್ಷಕರು ಬೆಂಗಳೂರಿನಿಂದ ಇಲ್ಲಿಗೆ ಹಂಗಾಮಿಯಾಗಿ ನಿಯೋಜನೆಗೊಂಡಿದ್ದರು. ಅವರ ಅವಧಿ ಮೇ 31ಕ್ಕೆ ಕೊನೆಗೊಂಡಿತು. ಅದರಿಂದಾಗಿ ಈಗ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಿಲ್ಲ. ವಿದ್ಯಾರ್ಥಿಗಳು ಸಂಸ್ಕೃತ ಕಲಿಯಲು ಸೇರ್ಪಡೆಯಾದಲ್ಲಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸಂಸ್ಕೃತ ಶಿಕ್ಷಕರಿದ್ದಾರೆ. ಅವರನ್ನು ವಾರದಲ್ಲಿ 3 ದಿನ ಅಲ್ಲಿಗೆ ನಿಯೋಜನೆ ಮಾಡಲಾಗುತ್ತದೆ. ಅಲ್ಲದೇ ಈ ಸಾಲಿನಲ್ಲಿ ವರ್ಗಾವಣೆಗೆ ಅವಕಾಶವಿರುವುದರಿಂದ ಇಲ್ಲಿಗೆ ಶಿಕ್ಷಕರು ಬರುವ ಸಾಧ್ಯತೆ ಇದೆ.
–ಎನ್. ಜಿ. ರಾಘವೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶೃಂಗೇರಿ
ಶಾಲೆಗೆ ಸಂಸ್ಕೃತ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಬೇರೆ ಐಚ್ಛಿಕ ಭಾಷೆ ತೆಗೆದುಕೊಳ್ಳುವಂತೆ ಹೇಳಲಾಗುತ್ತಿಲ್ಲ. ಆದರೆಶಾಲೆಯಲ್ಲಿ ಸಂಸ್ಕೃತ ಕಲಿಯಲು ಶಿಕ್ಷಕರ ಕೊರತೆ ಇದೆ. ಇರುವ ಒಬ್ಬ ಶಿಕ್ಷಕಿ ಹಂಗಾಮಿಯಾಗಿ ಇಲ್ಲಿಗೆ ನಿಯೋಜನೆಗೊಂಡವರಾಗಿದ್ದು ಇವರು ಯಾವಾಗ ಬರುತ್ತಾರೆ ಯಾವಾಗ ಇಲ್ಲಿಂದ ಹೊರಡುತ್ತಾರೆ ಎಂಬುದು ತಿಳಿಯುವುದಿಲ್ಲ. ಸರ್ಕಾರ ಕಾಯಂ ಆಗಿ ಇಲ್ಲಿಗೆ ಶಿಕ್ಷಕರನ್ನು ನಿಯೋಜಿಸಿದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಿಲ್ಲ.
–ದತ್ತಾತ್ರೆಯ ಯಾಜಿ, ಮುಖ್ಯ ಶಿಕ್ಷಕ, ಸರ್ಕಾರಿ ಪ್ರೌಢ ಶಾಲೆ, ತೊರೆಹಡ್ಲು
ವಿದ್ಯಾರ್ಥಿಗಳು ಸಂಸ್ಕೃತ ಕಲಿಯಬಾರದೆಂದು ನಮ್ಮಒತ್ತಾಯವಲ್ಲ. ನಾವು ಸಂಸ್ಕೃತ ವಿರೋ ಧಿಗಳಲ್ಲ. ಸರ್ಕಾರ ಸಂಸ್ಕೃತ ಶಿಕ್ಷಕರನ್ನು ಇಲ್ಲಿಗೆ ನೀಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ.
–ಗುರುಮೂರ್ತಿ, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ತೊರೆಹಡ್ಲು
ನಮ್ಮ ಮಕ್ಕಳು ಸಂಸ್ಕೃತ ಕಲಿತು ಸುಸಂಸ್ಕೃತರಾಗಬೇಕು. ಈ ಶಾಲೆಗೆ ಸಂಸ್ಕೃತ ಶಿಕ್ಷಕರನ್ನು ಸರ್ಕಾರ ನೇಮಿಸಿ ಮಕ್ಕಳಿಗೆ ಸಂಸ್ಕೃತ ಕಲಿಯಲು ಅವಕಾಶ ಮಾಡಿಕೊಡಬೇಕು.ಶಾರದೆಯ ಆವಾಸಸ್ಥಾನದಲ್ಲಿ ಸಂಸ್ಕೃತಕ್ಕೆ ಅವಕಾಶವಿಲ್ಲದಿರುವುದು ತುಂಬಾ ವ್ಯಥೆಯಾಗಿದೆ.
–ಹೆಸರು ಹೇಳಲು ಇಚ್ಛಿಸದ ಸಂಸ್ಕೃತ ಅಧ್ಯಾಪಕರು, ಶೃಂಗೇರಿ