Advertisement

ಸೌಲಭ್ಯವಿಲ್ಲದೆ ಸೊರಗುತ್ತಿದೆ ಸರ್ಕಾರಿ ಶಾಲೆ

11:23 AM Jun 14, 2019 | Team Udayavani |

ಸಂಬರಗಿ: ತಾಂವಶಿ ಗ್ರಾಮದ ಹೊರವಲಯದ ಸನದಿ ತೋಟದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ಹಾಗೂ ಶಿಕ್ಷಕರ ಸಮಸ್ಯೆಯಿಂದ ಸರ್ಕಾರಿ ಶಾಲೆ ಸೊರಗುವಂತಾಗಿದೆ.

Advertisement

ಇಲ್ಲಿರುವ ಶಾಲೆಯನ್ನು 2004ರಲ್ಲಿ ಪ್ರಾರಂಭಗೊಳಿಸಲಾಗಿತ್ತು. ನಂತರ ಶಿಕ್ಷಕರ ಹಾಗೂ ಮಕ್ಕಳ ದಾಖಲಾತಿ ಕೊರತೆಯಿಂದ ಸರ್ಕಾರಿ ಶಾಲೆ ಸ್ಥಗಿತಗೊಳಿಸಲಾಗಿತ್ತು. ಮತ್ತೆ ಈ ಶಾಲೆಯನ್ನು 1ರಿಂದ 5ನೇ ತರಗತಿಯವರೆಗೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಸೇರಿಕೊಂಡು ಪುನ ಪ್ರಾರಂಭಿಸಿ ಗಡಿಭಾಗದ ತೋಟದ ವಸತಿ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ. ಅಲ್ಲದೇ ಈ ವರ್ಷ 6ನೇ ತರಗತಿಯನ್ನು ಪ್ರಾರಂಭಿಸಿದ್ದಾರೆ. ಆದರೆ ಶಾಲೆಯಲ್ಲಿರುವ ಸಮಸ್ಯೆ ಪರಿಹರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೊರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಶಾಲೆಗೆ ಒಟ್ಟು 4 ಕೊಠಡಿಗಳಿದ್ದು, ಬಿಸಿ ಊಟದ ಕೋಣೆ, ಶಾಲೆಯ ಪ್ರಧಾನ ಗುರುಗಳ ಕೊಠಡಿ ಹಾಗೂ ಇನ್ನುಳಿದ 2 ಕೋಣೆಗಳಲ್ಲಿ 1 ಮತ್ತು 6ನೇ ತರಗತಿಗಳು ನಡೆಯುತ್ತಿವೆ. ಈ ಶಾಲೆಯಲ್ಲಿ ಪ್ರಧಾನ ಗುರು ಬಿಟ್ಟರೆ ಬೇರೆ ಶಿಕ್ಷಕರೆ ಇಲ್ಲ. ಶಾಲೆಗೆ ಎಸ್‌.ಡಿ.ಎಂ.ಸಿ ಕಮಿಟಿ ಹಾಗೂ ತೋಟದ ವಸತಿಗಳ ನಿವಾಸಿಗಳು ಪ್ರತಿ ಮನೆ ಮನೆಗೆ 500 ರಿಂದ 1000 ರೂ. ದೇಣಿಗೆ ನೀಡಿ ಶಾಲೆಗೆ ಅವಶ್ಯಕವಿರುವ ಕುರ್ಚಿ, ಟೇಬಲ್, ಅಡುಗೆ ಸಾಮಾನುಗಳನ್ನು ಶಾಲೆಗೆ ನೀಡಿದ್ದಾರೆ. ಇಲ್ಲಿರುವ ಸಮಸ್ಯೆ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಶಾಲೆಗೆ ಕೊಠಡಿ ಹಾಗೂ ಶಿಕ್ಷಕರ ನೇಮಿಸಲು ಮುಂದಾಗಬೇಕು ಎಂದು ಹಿರಿಯ ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next