Advertisement

ಮೂರು ತಿಂಗಳೊಳಗೆ ವಿವಿಗೆ ನೂತನ ಕುಲಪತಿ

09:46 AM Jun 23, 2018 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನೂತನ ಕುಲಪತಿ ನೇಮಕ ಸಂಬಂಧ ಒಂದು ತಿಂಗಳೊಳಗೆ “ಶೋಧನಾ ಸಮಿತಿ (ಸರ್ಚ್‌ ಕಮಿಟಿ)’ ರಚನೆಯಾಗುವ ನಿರೀಕ್ಷೆಯಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ 3 ತಿಂಗಳೊಳಗೆ ಹೊಸ ಕುಲಪತಿ ಅಧಿಕಾರ ಸ್ವೀಕರಿಸುವರು.

Advertisement

ಇದರ ಬೆನ್ನಲ್ಲೇ ರಾಜ್ಯದ ಪ್ರತಿಷ್ಠಿತ ವಿ.ವಿ.ಗಳಲ್ಲಿ ಒಂದಾದ ಮಂಗಳೂರು ವಿ.ವಿ. ಕುಲಪತಿ ಸ್ಥಾನಕ್ಕೆ ಬೇಡಿಕೆ ಹೆಚ್ಚಿದೆ. ಕುಲಪತಿಯಾಗಿದ್ದ ಪ್ರೊ| ಕೆ. ಭೈರಪ್ಪ ಎರಡು ವಾರಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ಈಗ ಪ್ರಭಾರ ಕುಲಪತಿಯಾಗಿ ಡಾ| ಕಿಶೋರ್‌ ಕುಮಾರ್‌ ಸಿ.ಕೆ. ನೇಮಕಗೊಂಡಿದ್ದಾರೆ. 

ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ, ಶೋಧನಾ ಸಮಿತಿಗೆ ಈಗಾಗಲೇ ಸಿಂಡಿಕೇಟ್‌, ಯುಜಿಸಿ ಹಾಗೂ ರಾಜ್ಯಪಾಲರ ನಾಮ ನಿರ್ದೇಶನ ಸದಸ್ಯರ ಆಯ್ಕೆ ಮುಗಿದಿದೆ. ಸರಕಾರಿ ನಾಮ ನಿರ್ದೇಶನ ಸದಸ್ಯರೊಬ್ಬರು ನೇಮಕವಾಗಬೇಕಿದೆ. ಸಂಬಂಧಿಸಿದ ಕಡತವನ್ನು ಸರಕಾರಕ್ಕೆ ನೀಡಲಾಗಿದ್ದು, ತಿಂಗಳೊಳಗೆ ಸಮಿತಿ ಸ್ಥಾಪಿಸುವ ಸಾಧ್ಯತೆ ಇದೆ.

ಹಿರಿಯ ಪ್ರಾಧ್ಯಾಪಕರಾದ ಪ್ರೊ| ರಾಮೇಗೌಡ ಹಾಗೂ ಪ್ರೊ| ನಾಗ ಭೂಷಣ್‌ ಅವರ ಹೆಸರನ್ನು ವಿ.ವಿ.ಯ ಸಿಂಡಿಕೇಟ್‌ ಕಳುಹಿಸಿದ್ದು, ಒಂದು ಹೆಸರು ಅಂತಿಮಗೊಳ್ಳಲಿದೆ. ಸಮಿತಿ ರಚನೆಯಾದ ಬಳಿಕ ಉನ್ನತ ಶಿಕ್ಷಣ ಇಲಾಖೆಯು ಕುಲಪತಿ ಹುದ್ದೆಗೆ ನೋಟಿಫಿಕೇಶನ್‌ ಹೊರಡಿಸಲಿದೆ. ಇಲಾಖೆಯ ಮೂಲಗಳ ಪ್ರಕಾರ ಅರ್ಹ ಪ್ರಾಧ್ಯಾಪಕರಿಗೆ 15 ದಿನಗಳ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆದರೆ ಸಪ್ಟೆಂಬರ್‌ ವೇಳೆಗೆ ಹೊಸ ಕುಲಪತಿ ನೇಮಕವಾಗುವರು.  ಆದರೆ ಆಕಾಂಕ್ಷಿಗಳಿಂದ ಲಾಬಿ ಹೆಚ್ಚಿದರೆ ವಿಳಂಬವಾಗಲಿದೆ. ಮೈಸೂರು ವಿ.ವಿ. ಕುಲಪತಿ ನೇಮಕ ಸುಮಾರು ಒಂದೂವರೆ ವರ್ಷದಿಂದ ಬಾಕಿ ಇದೆ.

Advertisement

ಏನಿದು ಶೋಧನಾ ಸಮಿತಿ?
ವಿ.ವಿ.ಗಳ ಕುಲಪತಿ ಹುದ್ದೆ ಖಾಲಿಯಾದಾಗ ವಿವಿಯ ಹಿರಿಯ ಡೀನ್‌ ಪ್ರಭಾರ ಕುಲಪತಿಯಾಗಿ ನೇಮಕವಾಗುತ್ತಾರೆ. ಬಳಿಕ ಶೋಧನಾ ಸಮಿತಿ ರಚನೆಯಾಗಲಿದ್ದು, ಸಿಂಡಿಕೇಟ್‌, ರಾಜ್ಯಪಾಲರು, ಸರಕಾರಿ ಹಾಗೂ ಯುಜಿಸಿ ತನ್ನ ಪ್ರತಿನಿಧಿಗಳನ್ನು ಕಳುಹಿಸುತ್ತದೆ. ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಒಬ್ಬ ಸದಸ್ಯನನ್ನು ಚೇರ್‌ಮನ್‌ ಆಗಿ ಆಯ್ಕೆ ಮಾಡಲಾಗುವುದು. ಅವರು ಅರ್ಹ ಪ್ರಾಧ್ಯಾಪಕರಿಂದ ಅರ್ಜಿ ಆಹ್ವಾನಿಸಿ, ಮೂರು ಹೆಸರುಗಳನ್ನು ಸರಕಾರಕ್ಕೆ ನೀಡುತ್ತಾರೆ. ಸರಕಾರ ರಾಜ್ಯಪಾಲರ ಒಪ್ಪಿಗೆ ಪಡೆದು, ಕುಲಪತಿಗಳನ್ನು  ನೇಮಿಸಲಾಗುತ್ತದೆ.

ಮೈಸೂರು ಲಾಬಿ
ಇಲ್ಲಿವರೆಗಿನ ಇತಿಹಾಸ ನೋಡಿದರೆ, ಮಂಗಳೂರು ವಿ.ವಿ.ಯ ಕುಲಪತಿ ಹುದ್ದೆಗೆ ಹೆಚ್ಚಾಗಿ ಮೈಸೂರು ವಿ.ವಿ. ಪ್ರಾಧ್ಯಾಪಕರನ್ನೇ ನೆಮಿಸಲಾಗಿದೆ. ಈ ತನಕ ಮಂಗಳೂರು ವಿ.ವಿ.ಯಲ್ಲಿ ಎಂಟು ಮಂದಿ ಕುಲಪತಿಗಳಾಗಿದ್ದು, ಇಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಮೈಸೂರು ವಿವಿಯವರು. ನಿರ್ಗಮಿತ ಕುಲಪತಿ ಭೈರಪ್ಪ ಕೂಡ ಮೈಸೂರು ವಿ.ವಿ. ಪ್ರಾಧ್ಯಾಪಕರು.

“ಕೊಡಗು ಜಿಲ್ಲೆಯ ಡಾ| ಕಾವೇರಪ್ಪ ಹಿಂದೆ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದು, ದ.ಕ. ಅಥವಾ ಉಡುಪಿ ಮೂಲದ ಯಾರೊಬ್ಬರೂ ಇಲ್ಲಿವರೆಗೆ ಮಂಗಳೂರು ವಿ.ವಿ.ಗೆ ಕುಲಪತಿಗಳಾಗಿಲ್ಲ. ಈ ಬಾರಿ ಅವಿಭಜಿತ ದ.ಕ. ಜಿಲ್ಲೆಯವರಿಗೆ ಆದ್ಯತೆ ನೀಡುವಂತೆ ಒತ್ತಡ ಹೇರಿದ್ದೇವೆ’ ಎಂದು ಸಿಂಡಿಕೇಟ್‌ ಸದಸ್ಯರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next