ಪರೀಕ್ಷೆ, ಅಂಕ, ಸ್ಪರ್ಧೆ ಬೇಡವೆಂದಲ್ಲ. ಆದರೆ ಪರೀಕ್ಷೆ, ಅಂಕ, ಫಲಿತಾಂಶ…ಏಕೆ ಬೇಕು? ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪರಸ್ಪರ ಹೋಲಿಸಿ ಹೆಚ್ಚು- ಕಮ್ಮಿ, ಶ್ರೇಷ್ಠ – ಕನಿಷ್ಠ, ಮೇಲು -ಕೀಳು ಎಂಬಿತ್ಯಾದಿ ಅಶೈಕ್ಷಣಿಕ ಮೌಲ್ಯಗಳನ್ನು ಪೋಷಿಸಲೇ? ಅಲ್ಲವೇ ಅಲ್ಲ. ಮತ್ಯಾಕೆ…?
ಶೈಕ್ಷಣಿಕವಾಗಿ ಯಾವುದೇ ತರಗತಿ ಯಿರಬಹುದು ಆಯಾ ಹಂತದಲ್ಲಿ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಗುರುತಿಸಿ, ವಿದ್ಯಾರ್ಥಿಗಳ ಕಲಿಕೆಯ ಸುಧಾರಣೆಗೆ ಕಾರ್ಯತಂತ್ರಗಳ ಪುನರ್ ನಿರೂಪಣೆಗಾಗಿ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಪರೀಕ್ಷೆ, ಫಲಿತಾಂಶ ಬೇಡ ಎನ್ನಲಾಗದು.
ಪರೀಕ್ಷೆ ಎಂದರೆ ಕೇವಲ ಲಿಖೀತ ಪರೀಕ್ಷೆ… ವರ್ಷದ ಕೊನೆಯ ಪರೀಕ್ಷೆ ಎಂದಲ್ಲ(ಗುಣಮಟ್ಟದ ಪರೀಕ್ಷೆಗೆ ಹಲವು ವಿಧದ ಪರೀಕ್ಷೆಗಳಿವೆ). ಅಂಕಾಧಾರಿತ ಗಳಿಕೆಯನ್ನು ಫಲಿತಾಂಶವೆನ್ನುವುದು, ಅಂಕವೇ ಕಲಿಕೆಯ ನಿಜ ಮೌಲ್ಯ ಮಾಪನದ ಫಲ ಎಂದೆಲ್ಲ ವಿಜೃಂಭಿಸುವುದು, ಅಂಕಾಧಾರಿತವಾಗಿ ಪರಸ್ಪರ ಹೋಲಿಸಿ ಕೊಳ್ಳುವುದು, ಅಂಕವನ್ನೇ ಗುಣಮಟ್ಟವೆಂದು ಮಾನಿಸುವುದು ಮತ್ತು ಸಾಧನೆಯೆಂದು ಸಾರ್ವಜನಿಕವಾಗಿ ಮೆರೆಸುವುದು, ಸ್ವತಃ ಶಿಕ್ಷಣ ಸಂಸ್ಥೆಗಳು ಬಿಂಬಿಸಿಕೂಳ್ಳಲು ಸ್ಪರ್ಧೆಗಿಳಿದಂತೆ ಓಟಕ್ಕಿಳಿ ಯುವುದು… ಮಿಗಿಲಾಗಿ ಸರಕಾರದ
ವ್ಯವಸ್ಥೆಯೇ ಫಲಿತಾಂಶವನ್ನು ಅಂಕಾ ಧಾರಿತವಾಗಿ ವರ್ಗೀಕರಿಸಿ ಫಸ್ಟ್ , ಸೆಕೆಂಡ್, ಹೈಯೆಸ್ಟ್ ಲೋವೆಸ್ಟ್…ಎಂದೆಲ್ಲ ಬಿತ್ತರಿ ಸುವುದು, ಪ್ರಚಾರ ಮಾಡುವುದು ಅತ್ಯಂತ ಅವೈ ಜ್ಞಾನಿಕ, ಅಮಾನ ವೀಯ, ಅಪ್ರಸ್ತುತ. ವೈಯಕ್ತಿಕ ನೆಲೆಯಲ್ಲಿ ವಿದ್ಯಾರ್ಥಿಗಳು ಅವರವರ ನೆಲೆಯಲ್ಲಿ, ಅವರವರ ಫಲಿತಾಂಶದ ಸಾಧನೆಯನ್ನು ವಿಜೃಂಭಿಸಲಿ.
ಪ್ರಸ್ತುತ ಎಸೆಸೆಲ್ಸಿ ಬೋರ್ಡ್, ಪಿ ಯು ಬೋರ್ಡ್ ನೊಂದಿಗೆ ವಿಲೀನಗೊಂಡಿದೆ. ಆದರೆ ಎಸೆಸೆಲ್ಸಿಯಲ್ಲಿ ಹಿಂದಿನಂತೆ ಬೋರ್ಡ್ ಪರೀಕ್ಷೆಯನ್ನು ಉಳಿಸಿಕೊಳ್ಳಲಾಗಿದೆ. ಉಳಿಸಿ ಕೊಂಡಿರುವ ಬಗ್ಗೆ ಆಕ್ಷೇಪಗಳಿಲ್ಲ. ಒತ್ತಾಯ ವೇನೆಂದರೆ ಪರೀಕ್ಷಾ ವ್ಯವಸ್ಥೆ ಮತ್ತು ಫಲಿತಾಂಶ ಘೋಷಿಸುವ ವಿಧಾನದಲ್ಲಿ ಸುಧಾರಣೆ ಬದ ಲಾವಣೆ ತರಬೇಕೆಂಬುದು.
ಏಕೆಂದರೆ ಸದ್ಯದ ಶೈಕ್ಷಣಿಕ ವ್ಯವಸ್ಥೆ ಯು ಪರೀಕ್ಷೆ ಮತ್ತು ಫಲಿತಾಂಶ ವ್ಯವಸ್ಥೆಯನ್ನೇ ಕೇಂದ್ರೀಕರಿಸಿ ಒಟ್ಟು ಶೈಕ್ಷಣಿಕ ವರ್ಷ ಅಂಕಕ್ಕೆ ಸೀಮಿತವಾಗಿದ್ದು, ಅಂತಿಮ ಪರೀಕ್ಷೆಯ ಮೂಲಕ ಪಡೆಯುವ ಅಂಕವನ್ನು ಗುಣಮಟ್ಟದ ಕಲಿಕೆಗೆ ಸಮೀಕರಿಸಿರುವುದು. ಈ ಕ್ರಮದಿಂದಾಗಿ ಶಿಕ್ಷಣ ಸಂಸ್ಥೆಗಳು ಇಡೀ ಶೈಕ್ಷಣಿಕ ವರ್ಷ ಕಲಿಕೆಗೆ, ಕಲಿಕಾ ಪ್ರಕ್ರಿಯೆಗೆ ಗಮನಕೊಡಲಾಗದೆ ಕೇವಲ ಅಂಕಕ್ಕಾಗಿಯೇ ಕೇಂದ್ರೀಕರಿಸುತ್ತಿವೆ. ಶಿಕ್ಷಣ ಅಂಕವೆಂಬ ಮಾಯೆ ಯೂಳಗೆ ಮಾಯವಾಗಿದೆ. ಶಾಲೆಗಳೆಲ್ಲ…ಕುಸ್ತಿ ಆಖಾಡದಂತಾಗಿದೆ.
Related Articles
ಈಗೇನು ಮಾಡುವುದು…? ಸದ್ಯದ ಅಂಕಾಧಾರಿತ ಪಾಸು – ಫೈಲು ವಿಧಾನವನ್ನು ಕೈಬಿಟ್ಟು (ಫೈಲಿಲ್ಲದ) ಗ್ರೇಡ್ ಆಧಾರಿತ ಫಲಿತಾಂಶ ನೀಡುವುದು. ಎರಡನೆಯದಾಗಿ ಗುಣಮಟ್ಟದ ಫಲಿತಾಂಶಕ್ಕಾಗಿ ಗುಣಮಟ್ಟದ ಬೋಧನೆ ಮತ್ತು ಕಲಿಕಾ ವ್ಯವಸ್ಥೆಯ ಬಗ್ಗೆ(ಕೆಳ ತರಗತಿಯಿಂದಲೆ) ಆದ್ಯತೆ ಹಾಗೂ ಗಮನಹರಿಸುವುದು. ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಎನ್ನುವುದು ಗುಣ ಮಟ್ಟದ ಶೈಕ್ಷಣಿಕ ವ್ಯವಸ್ಥೆಯಲ್ಲ. ಅದು ಕಲಿಕಾ ಸುಧಾರಣೆಯ ಭಾಗವೂ ಅಲ್ಲ. ಹಾಗಾಗಿ ಶೈಕ್ಷಣಿಕವಾಗಿ ಆದ್ಯತೆ ಯಾವುದಕ್ಕೆ ಕೊಡಬೇಕೋ ಅದಕ್ಕೆ ಕೊಡದೇ ಹೋದರೆ ಭವಿಷ್ಯವಿಲ್ಲದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಣಕ್ಕೇ ಭವಿಷ್ಯವಿಲ್ಲ ಎಂಬ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ.
ರಾಮಕೃಷ್ಣ ಭಟ್ ಚೊಕ್ಕಾಡಿ, ಬೆಳಾಲು