Advertisement
“ಏನೇ, ಮತ್ತೆ ಒಂದು ಸುತ್ತು ದಪ್ಪ ಆಗಿದ್ದೀಯಾ?’- ಕೆಲ ತಿಂಗಳುಗಳ ಹಿಂದೆ, ಗೆಳತಿಯ ಮಗಳ ಮದುವೆಗೆ ಹೋಗಿದ್ದಾಗ ನನ್ನತ್ತ ಈ ಪ್ರಶ್ನೆ ತೂರಿ ಬಂತು. ಮದುವೆಗೂ ಮುಂಚೆ ಹಂಚಿಕಡ್ಡಿ, ಊದುಗೊಳವೆ, ಕಡ್ಡಿ ಪೈಲ್ವಾನ್ ಅಂತೆಲ್ಲಾ ಕರೆಸಿಕೊಳ್ಳುತ್ತಿದ್ದ ನಾನು, ಮದುವೆಯ ನಂತರ ನಿಧಾನವಾಗಿ ಊದತೊಡಗಿದ್ದೆ. ಮಕ್ಕಳಿಬ್ಬರು ಹುಟ್ಟಿದ ನಂತರ, ನಾನೂ ತೂಕದ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಟ್ಟೆ. ತೂಕ ಹೆಚ್ಚಿಸಿಕೊಳ್ಳಲು ಮೊದಲು ಏನೇನೆಲ್ಲಾ ಪ್ರಯತ್ನ ಮಾಡಿ ಸೋತಿದ್ದೆನೋ, ಅವೆಲ್ಲವೂ ಒಂದೇ ಸಾರಿ ವರ್ಕೌಟ್ ಆಗಿ, ನಾನು ಜಿಮ್‌ನಲ್ಲಿ ವರ್ಕೌಟ್ ಮಾಡಬೇಕಾದ ಸ್ಥಿತಿ ತಲುಪಿದ್ದು ಮಾತ್ರ ಇತ್ತೀಚೆಗೆ.
Related Articles
Advertisement
ಹೀಗೇ ಒಂದಿನ ಬಿರುಸಾಗಿ ಹೆಜ್ಜೆ ಹಾಕುತ್ತಿರಬೇಕಾದರೆ, ಪಾರ್ಕ್ ಗೇಟಿನ ಎದುರು ನಿಂತಿದ್ದ ಹುಡುಗನೊಬ್ಬ ಅಡ್ಡ ಹಾಕಿ, ಕೈಗೊಂದು ಸಣ್ಣ ಕರಪತ್ರ ಕೊಟ್ಟ. ತೆರೆದು ನೋಡಿದರೆ, ಅದೊಂದು ಯೋಗ ಶಾಲೆಯ ಜಾಹೀರಾತು ಚೀಟಿ. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಉಚಿತ ಯೋಗ ಕಾರ್ಯಾಗಾರ ಅಂತ ಬರೆದಿತ್ತು ಅದರಲ್ಲಿ. “ಎಲಾ ಇವನಾ, ಆಂಟಿ ಡುಮ್ಮಿ ಇದ್ದಾಳೆ ಅಂತ ನನಗೆ ಮಾತ್ರ ಚೀಟಿ ಕೊಟ್ಟಿದ್ದಾನ?’ ಅಂತ ಅನುಮಾನವಾಗಿ ತಿರುಗಿದರೆ, ಅವನು ಸಿಕ್ಕಸಿಕ್ಕವರಿಗೆಲ್ಲ ಚೀಟಿ ಹಂಚುತ್ತಿದ್ದ. “ಹೌದಲ್ಲಾ, ನಾನ್ಯಾಕೆ ಯೋಗ ಕ್ಲಾಸ್‌ಗೆ ಸೇರಬಾರದು?’ ಅಂತ ತಲೆಯೊಳಗೆ ದೀಪ ಹೊತ್ತಿಕೊಂಡಿದ್ದೇ ಆವಾಗ.
ವಾಕಿಂಗ್ ಮುಗಿಸಿ ಬಂದವಳೇ ಆ ಕರಪತ್ರದಲ್ಲಿದ್ದ ನಂಬರ್‌ಗೆ ಫೋನ್ ಮಾಡಿ, ಎಲ್ಲಿ , ಎಷ್ಟು ಹೊತ್ತಿಗೆ ಕ್ಲಾಸ್ ನಡೆಯುತ್ತೆ ಅಂತೆಲ್ಲಾ ವಿಚಾರಿಸಿದೆ. ಮನೆಯಿಂದ ಹತ್ತು ನಿಮಿಷ ನಡೆದರೆ ಯೋಗ ಕ್ಲಾಸ್. ಮುಂದಿನ ವಾರದಿಂದ ನಾನೂ ಬರುತ್ತೇನೆ ಅಂತ ಹೇಳಿ, ಹೆಸರು ನೋಂದಾಯಿಸಿದೆ. ನನ್ನ ಹೊಸ ಸಾಹಸಕ್ಕೆ ಗಂಡನಿಂದ ಯಾವ ತಕರಾರೂ ಬರಲಿಲ್ಲವಾದರೂ, ಬೆಳಗ್ಗೆ ಅವರ ಆಫೀಸ್ ಟೈಮಿಂಗ್‌ಗೆ ತೊಂದರೆಯಾಗದಂತೆ ಬೆಳಗ್ಗೆ 5.30ರ ಕ್ಲಾಸ್‌ಗೆ ಸೇರಿಕೊಂಡೆ. ಮನೆಗೆ ಬಂದು ಎಂದಿನಂತೆ ಕಾಫಿ-ತಿಂಡಿ ಮಾಡಬಹುದು ಅನ್ನೋದು ನನ್ನ ಲೆಕ್ಕಾಚಾರ.
ನಮ್ಮದು ಮಹಿಳೆಯರಿಗಾಗಿ ನಡೆಯುವ ಸ್ಪೆಷಲ್ ಬ್ಯಾಚ್. ಅದಕ್ಕೇ ಅಷ್ಟು ಬೇಗ ತರಗತಿ ಶುರುವಾಗುವುದು. ನಮ್ಮ ನಂತರದ ಬ್ಯಾಚ್ ಗಂಡಸರಿಗಂತೆ. ಯಾಕಂದ್ರೆ, ಅವರೇನು ಮನೆಗೆ ಹೋಗಿ ತಿಂಡಿ ರೆಡಿ ಮಾಡುವ ಗಡಿಬಿಡಿ ಇಲ್ಲವಲ್ಲ! ಯೋಗಕ್ಕೆ ಬರುವ ಹೆಂಗಸರ ಪಾಡಂತೂ ಕೇಳಲೇಬಾರದು. ಕ್ಲಾಸ್ ಮುಗಿದರೆ ಸಾಕು ಅನ್ನುವ ಗಡಿಬಿಡಿಯಲ್ಲಿರುವ ಅವರೆಲ್ಲ, ಆರೂವರೆಯಾಗುತ್ತಿದ್ದಂತೆ, ಬಿಟ್ಟ ಬಾಣದಂತೆ ಮನೆಯತ್ತ ಓಡುತ್ತಾರೆ. ಕೆಲವರು ಗಾಡಿಯಲ್ಲಿ ಬರುವವರಾದರೆ, ಇನ್ನೂ ಕೆಲವರು ನಡೆದೇ ಹೋಗುವವರು. ಮಕ್ಕಳಿಗೆ ಟಿಫನ್ ತಯಾರಿಸಬೇಕು, ನಾನು ಎಬ್ಬಿಸದಿದ್ದರೆ ನಮ್ಮನೆಯವರು ಏಳುವುದೇ ಇಲ್ಲ, ಇವತ್ತು ಮಗನಿಗೆ ಪರೀಕ್ಷೆ ಇದೆ, ಮಗಳಿನ್ನೂ ಪ್ರಾಜೆಕ್ಟ್ ವರ್ಕ್ ಪೂರ್ತಿ ಮಾಡಿಲ್ಲ…ಅಂತ ಒಬ್ಬರಿಗೊಬ್ಬರು ಮಾತಾಡುತ್ತಲೇ, ಆಸನಾಭ್ಯಾಸ ಮಾಡುತ್ತಿರುತ್ತಾರೆ ಪಾಪ. ಪ್ರಾಣಾಯಾಮ ಅಂತ ಕಣ್ಮುಚ್ಚಿ ಕುಳಿತಾಗಲೂ ಅವರ ಗಮನ ಮನೆಯತ್ತಲೇ ಓಡುತ್ತಿರುತ್ತದೇನೋ. ಅವರ ಮಧ್ಯದಲ್ಲಿ ಕಾಲೇಜಿಗೆ ಹೋಗುವಷ್ಟು ದೊಡ್ಡ ಮಕ್ಕಳಿರುವ, ನಾನು ಮನೆ ತಲುಪುವಷ್ಟರಲ್ಲಿ ಕಾಫಿ ಡಿಕಾಕ್ಷನ್ ಹಾಕಿ ಕಾಯುತ್ತಿರುವ ಗಂಡನನ್ನು ಪಡೆದ ನಾನೇ ಪುಣ್ಯವಂತೆ ಅನ್ನಿಸುತ್ತದೆ.
“ನೋಡ್ರೀ, ಮನೇಲಿ ಅಷ್ಟೆಲ್ಲಾ ಕೆಲಸ ಮಾಡ್ತೀನಿ. ಬೆಳ್‌ಬೆಳಗ್ಗೆ ಯೋಗ ಕೂಡಾ ಮಾಡ್ತೀನಿ. ಆದ್ರೂ ಮೈ ತೂಕ ಇಳೀತಿಲ್ಲ’… ಅಂತ, ಪಕ್ಕ ಕುಳಿತ ಮಹಿಳೆ ಏದುಸಿರು ಬಿಡುತ್ತಾ ಹೇಳಿದಾಗ, ನನಗೂ ಹೌದಲ್ಲ ಅನ್ನಿಸಿತು. ಹಾಗಂತ, ನಾನೇನು ನಾಳೆಯಿಂದ ಕ್ಲಾಸ್‌ಗೆ ಚಕ್ಕರ್ ಹೊಡೆಯೋದಿಲ್ಲ ಆಯ್ತಾ? ಮುಂದಿನ ಸಲ ಸಿಕ್ಕಾಗ ಗೆಳತಿ, “ಏನೇ, ಮೈ ಹುಷಾರಿಲ್ವಾ? ತೆಳ್ಳಗಾಗಿದ್ದೀಯ?’ ಅಂತ ಕೇಳ್ಬೇಕು. ಅಷ್ಟು ತೆಳ್ಳಗಾಗ್ತೀನಿ. ನೋಡ್ತಾ ಇರಿ…
ರೋಹಿಣಿ ಎನ್