Advertisement

ಕಳೆಗುಂದಿದ ಆಪ್‌ ಆಕರ್ಷಣೆ 

08:20 AM Nov 28, 2017 | |

ಅಣ್ಣಾ ಹಜಾರೆ ಹಿಂದಿನ ಯುಪಿಎ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಪ್ರಾರಂಭಿಸಿದ ಆಂದೋಲನದ ಮೂಲಕ ಹುಟ್ಟಿಕೊಂಡ ಆಮ್‌ ಆದ್ಮಿ ಪಾರ್ಟಿ ರವಿವಾರ ಐದನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಂಡಿದೆ. 2012, ನ. 26ರಂದು ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಅಣ್ಣಾ ಹಜಾರೆಯ ಬಲಗೈಯಂತಿದ್ದ ಅರವಿಂದ ಕೇಜ್ರಿವಾಲ್‌ ನೇತೃತ್ವದಲ್ಲಿ ಜನ್ಮತಾಳಿದ ಅದೇ ಸ್ಥಳದಲ್ಲಿ ಐದನೇ ಸಂಸ್ಥಾಪನಾ ದಿನಾಚರಣೆಯೂ ನಡೆದಿದೆ. ಐದು ವರ್ಷದ ಹಿಂದೆ ಆಪ್‌ ಎಂಬ ವಿನೂತನ ಪರಿಕಲ್ಪನೆಯ ಪಕ್ಷ ಜನ್ಮತಾಳಿದಾಗ ಇಡೀ ದೇಶ ಪುಳಕಗೊಂಡಿತ್ತು. ದೇಶದ ಕೊಳಕು ರಾಜಕೀಯ ವ್ಯವಸ್ಥೆಯನ್ನು ಗುಡಿಸಿ ಸ್ವತ್ಛಗೊಳಿಸಲು ಹುಟ್ಟಿದ ಪಕ್ಷವನ್ನು ಜನರು ಬಹಳ ಸಂಭ್ರಮದಿಂದ ಬರಮಾಡಿಕೊಂಡರು. ಕಡೆಗೂ ವ್ಯವಸ್ಥೆಯನ್ನು ಸ್ವತ್ಛಗೊಳಿಸುವ ಅವತಾರ ಪುರುಷನೊಬ್ಬ ಸಿಕ್ಕಿದ ಎಂದು ಜನರು ಸಂಭ್ರಮಿಸಿದರು. ಜಂತರ್‌ ಮಂತರ್‌ನಲ್ಲೂ ಜನರ ಉತ್ಸಾಹ ಮೇರಿ ಮೀರಿತ್ತು. ಎಲ್ಲೆಡೆ ಮೈ ಹೂಂ ಆಪ್‌ ಘೋಷಣೆ, ಎಲ್ಲರ ತಲೆಯಲ್ಲೂ ಆಮ್‌ ಆದ್ಮಿ ಪಾರ್ಟಿ ಎಂದು ಬರೆದ ಬಿಳಿ ಟೋಪಿ, ಕೈಯಲ್ಲಿ ಪಕ್ಷದ ಚಿಹ್ನೆಯಾದ ಪೊರಕೆ. ಒಟ್ಟಾರೆ ದೇಶ ಹೊಸ ಮನ್ವಂತರದತ್ತ ವಾಲುತ್ತಿದೆ ಎಂಬ ಭಾವನೆಯೇ ಜನರು ಈ ಪಕ್ಷವನ್ನು ಭಾರೀ ನಿರೀಕ್ಷೆಯಿಂದ ನೋಡುವಂತೆ ಮಾಡಿತ್ತು. ಐದು ವರ್ಷಗಳ ಬಳಿಕ ಈ ಉತ್ಸಾಹ ಇಮ್ಮಡಿಯಾಗಿ ಕಾಣಿಸಬೇಕಿತ್ತು. ಆದರೆ ರವಿವಾರ ಅಲ್ಲಿ ಕಂಡ ದೃಶ್ಯ ಸಂಪೂರ್ಣ ತದ್ವಿರುದ್ಧವಾಗಿತ್ತು. ವೇದಿಕೆಯ ಮೇಲೆ ಮತ್ತು ಕೆಳಗೆ ಕುಳಿತವರ ಮುಖಗಳಲ್ಲಿ ಏನೋ ಒಂದು ರೀತಿಯ ಅವ್ಯಕ್ತ ದುಗುಡ ಕಾಣಿಸುತ್ತಿತ್ತು. ಯಾರಿಗೂ ಇದು ಒಂದು ಸಂಭ್ರಮದ ಕ್ಷಣ ಎಂಬ ಭಾವನೆಯೇ ಇರಲಿಲ್ಲ. ಎಲ್ಲರಲ್ಲೂ ಏನೋ ಒಂದು ಕರ್ತವ್ಯವನ್ನು ಮುಗಿಸಿ ಹೋಗುವ ಧಾವಂತವಿತ್ತೇ ಹೊರತು ನಿಜವಾದ ಲವಲವಿಕೆ ಕಾಣುತ್ತಿರಲಿಲ್ಲ. ಐದು ವರ್ಷದಲ್ಲಿ ಆಪ್‌ನಲ್ಲಿ ಆಗಿರುವ ಬದಲಾವಣೆಯನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸುತ್ತಿರುವಂತೆ ಕಾಣಿಸುತ್ತಿತ್ತು. ಐದು ವರ್ಷ ಎನ್ನುವುದು ರಾಜಕೀಯ ಪಕ್ಷಗಳ ಮಟ್ಟಿಗೆ ದೊಡ್ಡ ಅವಧಿಯಲ್ಲ. ಆದರೆ ಈ ಐದು ವರ್ಷದಲ್ಲಿ ಆಪ್‌ನ ಆಕರ್ಷಣೆ ಅರ್ಧಕ್ಕರ್ಧ ಕಡಿಮೆಯಾಗಿದೆ ಎನ್ನುವುದು ಮಾತ್ರ ವಾಸ್ತವ. ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದಿಲ್ಲಿಯ ಮುಖ್ಯಮಂತ್ರಿಯಾಗಿರುವ ಅರವಿಂದ ಕೇಜ್ರಿವಾಲ್‌ ಭಾಷಣ ಎಂದಿನಂತೆ ಪ್ರಧಾನಿ ಮೋದಿಯನ್ನು ಟೀಕಿಸಲು ಸೀಮಿತವಾಯಿತೇ ಹೊರತು ಪಕ್ಷದ ಭವಿಷ್ಯದ ನಡೆಯ ಕುರಿತು ಯಾವ ಸುಳಿವನ್ನೂ ನೀಡಲಿಲ್ಲ. ದೇಶ ವಿದೇಶಗಳಿಂದ ಅನೇಕ ಮಂದಿ ಆಪ್‌ ಪಕ್ಷಕ್ಕಾಗಿ ದುಡಿಯಲು ಬಂದಿದ್ದರು. ಅನೇಕ ಮಂದಿ ನೌಕರಿಗೆ ರಾಜೀನಾಮೆ ನೀಡಿದ್ದರು ಕೂಡ. ಪಕ್ಷದ  ಐದನೇ ವಾರ್ಷಿಕೋತ್ಸವಕ್ಕೆ ತನ್ನ ಉಡುಗೊರೆಯೋ ಎಂಬಂತೆ ಆದಾಯ ಕರ ಇಲಾಖೆ ಮರುದಿನವೇ ಪಕ್ಷಕ್ಕೆ ಕ್ರಮಬದ್ಧವಲ್ಲದ ದೇಣಿಗೆ ಸ್ವೀಕರಿಸಿರುವುದಕ್ಕೆ ನೊಟೀಸ್‌ ಜಾರಿಗೊಳಿಸಿದೆ. 

Advertisement

ಐದೇ ವರ್ಷದಲ್ಲಿ ಆಪ್‌ ಕುರಿತು ಜನರು ಭ್ರಮೆನಿರಸನಗೊಳ್ಳಲು ಸಾವಿರಾರು ಕಾರಣಗಳನ್ನು ನೀಡಬಹುದು. ಯಾವ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿ ಆಪ್‌ ಜನ್ಮತಾಳಿತೋ ಅದೇ ಭ್ರಷ್ಟಾಚಾರದ ಮಡುವಿನಲ್ಲಿ ಈಗ ಬಿದ್ದು ಒದ್ದಾಡುತ್ತಿದೆ. ದಿಲ್ಲಿಯ ನಾಲ್ವರು ಸಚಿವರು ಭ್ರಷ್ಟಾಚಾರ ಮತ್ತು ಕ್ರಿಮಿನಲ್‌ ಕೇಸಿನ ಆರೋಪ ಹೊತ್ತು ಪದಭ್ರಷ್ಟರಾಗಿದ್ದಾರೆ. ಹಲವು ನಾಯಕರ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳಿವೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಯಾವ ಆಶ್ವಾಸನೆಯನ್ನೂ ಈಡೇರಿಸದೆ ಜನರ ಆಕ್ರೋಶಕ್ಕೆ ಪಕ್ಷ ತುತ್ತಾಗಿದೆ. ಮುಖ್ಯವಾಗಿ ಭ್ರಷ್ಟಾಚಾರದ ವಿಷಯದಲ್ಲಿ ರಾಜಿ ಮಾಡಿಕೊಂಡದ್ದೇ ಆಪ್‌ ಅವನತಿಗೆ ಕಾರಣ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಮತ. ಅದರಲ್ಲೂ ಕಾಂಗ್ರೆಸ್‌ ಮತ್ತು ಲಾಲೂ ಪ್ರಸಾದ್‌ ಯಾದವ್‌ ಜತೆಗೆ ಆಪ್‌ ಕೈಜೋಡಿಸಿದಾಗ ಇದು ಉಳಿದ ಪಕ್ಷಗಳಂತೆ ಇನ್ನೊಂದು ಪಕ್ಷವೇ ಹೊರತು ಭಿನ್ನ ಪಕ್ಷವಲ್ಲ ಎನ್ನುವುದು ಜನರಿಗೆ ಮನದಟ್ಟಾಗಿತ್ತು. ಹೀಗಾಗಿ ಅನಂತರ ಎದುರಿಸಿದ ಚುನಾವಣೆಯಲ್ಲೆಲ್ಲ ಆಪ್‌ನ ಸಾಧನೆ ಇಳಿಮುಖವಾಗುತ್ತಾ ಬಂದಿದೆ. ನಿಚ್ಚಳ ಬಹುಮತವಿದ್ದರೂ ದಿಲ್ಲಿಯಂತಹ ಸಣ್ಣ ರಾಜ್ಯದ ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗದ ಪಕ್ಷಕ್ಕೆ ಇಡೀ ದೇಶವನ್ನು ಆಳಲು ಸಾಧ್ಯವಾದೀತೆ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಸುಳಿದಾಡುತ್ತಿದೆ. 

ಪಕ್ಷ ಕಟ್ಟಲು ದೇಶವಿದೇಶಗಳಲ್ಲಿರುವ ನೌಕರಿ ಬಿಟ್ಟು ಬಂದವರೆಲ್ಲ ಭ್ರಮೆ ನಿರಸನಗೊಂಡು ವಾಪಸು ಹೋಗಿದ್ದಾರೆ. ಕೆಲವರು ಬೇರೆ ಪಕ್ಷ ಸೇರಿದ್ದಾರೆ. ಪ್ರಮುಖ ನಾಯಕರಿಬ್ಬರು ಉಚ್ಛಾಟಿತರಾಗಿ ತಮ್ಮದೇ ಪಕ್ಷವನ್ನು ಸ್ಥಾಪಿಸಿಕೊಂಡಿದ್ದಾರೆ. ಹೋರಾಟ ಮಾಡುವುದು ಬೇರೆ ಪಕ್ಷ ಸ್ಥಾಪಿಸಿ ರಾಜಕೀಯ ಮಾಡುವುದು ಬೇರೆ ಎನ್ನುವುದು ಈಗ ಆಪ್‌ ನಾಯಕರಿಗೆ ಅರ್ಥವಾಗಿರಬಹುದು. ನಡೆಯಲು ಕಲಿಯುವುದಕ್ಕೂ ಮೊದಲೇ ಓಡಲು ಪ್ರಯತ್ನಿಸಿದರೆ ಏನಾಗಬೇಕಿತ್ತೂ ಅದು ಆಪ್‌ ಪಾಲಿಗಾಗಿದೆ. ಹಾಗೆಂದು ಕಾಲ ಇನ್ನೂ ಮಿಂಚಿ ಹೋಗಿಲ್ಲ. ಪಕ್ಷವನ್ನು ಮರಳಿ ಕಟ್ಟುವ ಅವಕಾಶಗಳು ಕೇಜ್ರಿವಾಲ್‌ಗಿದೆ. ಆದರೆ ಆ ಮಟ್ಟದ ವಿವೇಚನೆಯನ್ನು ಅವರು ಹೊಂದಿದ್ದಾರೆಯೇ?

Advertisement

Udayavani is now on Telegram. Click here to join our channel and stay updated with the latest news.

Next