Advertisement

ಬರುತ್ತಿದೆ ಹೊಸ ಕಾನೂನು : ಇನ್ನು ಸೋಷಿಯಲ್ ಮೀಡಿಯಾದಲ್ಲಿ ಅನಾಮಿಕತೆಗೆ ಅವಕಾಶವಿಲ್ಲ!

10:15 AM Feb 14, 2020 | Hari Prasad |

ನವದೆಹಲಿ: ವಿಶ್ವಾದ್ಯಂತ ಹಲವಾರು ದೇಶಗಳು ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆ ನಿಯಂತ್ರಣ ಸಾಧಿಸಲು ಹೊಸ ಕಾನೂನುಗಳನ್ನು ಪರಿಚಯಿಸುತ್ತಿವೆ. ಈ ಹೊಸ ಕಾನೂನುಗಳಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಅನಾಮಿಕತೆಯನ್ನು ಕಾಪಾಡಿಕೊಳ್ಳಲು ಅವಕಾಶವಿರುವುದಿಲ್ಲ.

Advertisement

ಅದೇ ರೀತಿ ಭಾರತ ಸರಕಾರವೂ ಸಹ ಫೇಸ್ಬುಕ್, ವಾಟ್ಸ್ಯಾಪ್, ಟ್ವಿಟ್ಟರ್, ಟಿಕ್ ಟಾಕ್, ಇನ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮಾಹಿತಿ ಹಂಚಿಕೆಯ ಕುರಿತಾದಂತೆ ಕಾನೂನನ್ನು ರೂಪಿಸುತ್ತಿದೆ. ಈ ಕಾನೂನಿಕ ಪ್ರಕಾರ ಅವಶ್ಯಕ ಸಂದರ್ಭಗಳಲ್ಲಿ ಸರಕಾರದ ಏಜೆನ್ಸಿಗಳು ಬಳಕೆದಾರರ ಮಾಹಿತಿಗಳನ್ನು ಕೇಳಿದರೆ ಈ ಸಾಮಾಜಿಕ ಜಾಲತಾಣ ಕಂಪೆನಿಗಳು ಮಾಹಿತಿಗಳನ್ನು ನೀಡವುದು ಕಡ್ಡಾಯವಾಗಿರುತ್ತದೆ.

ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹರಿದಾಡುಮ ಮಾಹಿತಿಗಳನ್ನು ಹೆಚ್ಚೆಚ್ಚು ಜವಾಬ್ದಾರಿಯುತಗೊಳಿಸುವ ನಿಟ್ಟಿನಲ್ಲಿ ಸರಕಾರ ಈ ಕಾನೂನನ್ನು ರೂಪಿಸುತ್ತಿದೆಯಾದರೂ ಇಲ್ಲಿ ಕೋಟ್ಯಂತರ ಬಳಕೆದಾರರ ಮಾಹಿತಿಗಳ ಗೌಪ್ಯತೆ ಮತ್ತುಅನಾಮಿಕತೆ ಉಳಿಯುವುದಿಲ್ಲ ಎನ್ನುವ ವಾದವೂ ಕೇಳಿಬರುತ್ತಿದೆ.

ಸುಳ್ಳು ಸುದ್ದಿಗಳು, ಮಕ್ಕಳ ಆಶ್ಲೀಲ ಚಿತ್ರಗಳು, ಜನಾಂಗ ನಿಂದನೆ ಸಂಬಂ‍ಧಿತ ವಿಷಯಗಳು ಅಥವಾ ಭಯೋತ್ಪಾದಕತೆಗೆ ಕುಮ್ಮಕ್ಕು ನೀಡುವ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವಿಚಾರದಲ್ಲಿ ಸಾಮಾಜಿಕ ಜಾಲತಾಣ ಮಾಧ್ಯಮ ಸಂಸ್ಥೆಗಳನ್ನು ಇನ್ನಷ್ಟು ಜವಾಬ್ದಾರಿಯುತಗೊಳಿಸುವ ಉದ್ದೇಶವನ್ನು ಈ ಕಾನೂನು ಹೊಂದಿದೆ.

2018ರ ಡಿಸೆಂಬರ್ ತಿಂಗಳಿನಲ್ಲಿ ಭಾರತ ಸರಕಾರವು ಈ ಹೊಸ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಸಾರ್ವಜನಿಕ ಅಭಿಪ್ರಾಯಕ್ಕಾಗಿ ಹೊರಹಾಕಿತ್ತು.

Advertisement

ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತೀಯ ಇಂಟರ್ನೆಟ್ ಮತ್ತು ಮೊಬೈಲ್ ಸಂಘಟನೆ ಹಾಗೂ ಫೇಸ್ಬುಕ್, ಅಮೆಝಾನ್.ಕಾಂ ಮತ್ತು ಗೂಗಲ್ ನ ಮಾತೃಸಂಸ್ಥೆಆಲ್ಫಾಬೆಟ್ ಗಳು ಸದಸ್ಯರಾಗಿರುವ ವ್ಯವಹಾರ ಸಮೂಹಗಳು ಈ ನೂತನ ಕಾನೂನು ‘ಸುಪ್ರೀಂಕೋರ್ಟ್ ಗುರುತಿಸಿರುವ ಖಾಸಗಿ ಹಕ್ಕುಗಳ ಸ್ಪಷ್ಟ ಉಲ್ಲಂಘನೆ’ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದವು.

ಆದರೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಹೊಸ ಕಾನೂನನ್ನು ಹೆಚ್ಚಿನ ಬದಲಾವಣೆಗಳಿಲ್ಲದೇ ಈ ತಿಂಗಳ ಕೊನೆಯೊಳಗೆ ಪ್ರಕಟಿಸುವ ನಿರೀಕ್ಷೆ ಇದೆ.

ಮೂಲ ಕರಡು ಪ್ರತಿಯಲ್ಲಿ ಇರುವಂತೆ, ಯೂಟ್ಯೂಬ್, ಟಿಕ್ ಟಾಕ್, ವಾಟ್ಸ್ಯಾಪ್ ನಂತಹ ಸಾಮಾಜಿಕ ಜಾಲತಾಣ ಮಾಧ್ಯಮಗಳು ತಮ್ಮ ಮೂಲಕ ಮಾಡಲಾದ ಪೋಸ್ಟ್ ಗಳ ಮೂಲವನ್ನು 72 ಗಂಟೆಗಳೊಳಗಾಗಿ ಪತ್ತೆ ಮಾಡಲು ಸರಕಾರಕ್ಕೆ ಸಹಾಯಮಾಡಬೇಕು.

ಮತ್ತು ಸರಕಾರದ ಉದ್ದೇಶಿತ ತನಿಖೆಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಂಪೆನಿಗಳು ತಮ್ಮಲ್ಲಿರುವ ಈ ಮಾಹಿತಿ ದಾಖಲೆಗಳನ್ನು 180 ದಿನಗಳವರೆಗೆ ತಮ್ಮಲ್ಲಿ ಕಾಯ್ದಿರಿಸಿಕೊಳ್ಳಬೆಕು. ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಕಾಯ್ದೆಯ ಭಾಷೆ ಹಾಗೂ ವಿಷಯಗಳನ್ನು ಸಚಿವಾಲಯವು ಇನ್ನೂ ಅಂತಿಮಗೊಳಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next