ನಾಗಮಂಗಲ: “ದೇವರು, ಜನರ ಆಶೀರ್ವಾದ ಇರೋವರೆಗೂ ನಾನು ಕಲ್ಲು ಬಂಡೆ ಥರ ಇರಿ¤àನಿ. ನನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದಿಚುಂಚನಗಿರಿಯಲ್ಲಿ ಶುಕ್ರವಾರ ನಡೆದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 74ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. “ನಾನು ಶಾಶ್ವತವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದಿಲ್ಲ. ಭಗವಂತ ಎಷ್ಟು ದಿನ ಸಿಎಂ ಆಗಿರಬೇಕೆಂದು ಬರೆದಿದ್ದಾನೆಯೋ ಅಷ್ಟು ದಿನ ಸಿಎಂ ಆಗಿ ಇರುತ್ತೇನೆ. ಅಧಿಕಾರ ಕಳೆದುಕೊಳ್ಳುತ್ತೇನೆ ಎಂದು ನಾನು ಯಾವತ್ತೂ ಕುಗ್ಗಿಲ್ಲ’ ಎಂದರು.
ರಾಜ್ಯ ರಾಜಕಾರಣದಲ್ಲಿ ಅನೇಕ ಬೆಳವಣಿಗೆಗಳು ನಡೆದಿವೆ. ಮಾಧ್ಯಮಗಳು ರಾಜಕೀಯವಾಗಿ ನನ್ನ ಹಾಗೂ ಸರ್ಕಾರದ ಬಗ್ಗೆ ಅನೇಕ ವರದಿ ಪ್ರಕಟಿಸಲಿ. ಆದರೆ, ನಿರ್ಮಲಾನಂದನಾಥ ಸ್ವಾಮೀಜಿ ಹೆಸರನ್ನು ಪ್ರಸ್ತಾಪಿಸಬೇಡಿ ಎಂದು ಮನವಿ ಮಾಡಿದರು.
ನನ್ನ ವೈಯಕ್ತಿಕ ವಿಚಾರಕ್ಕಾಗಲಿ, ಅಧಿಕಾರ ಉಳಿಸಿಕೊಳ್ಳುವುದಕ್ಕಾಗಲಿ ನಾನು ಶ್ರೀಗಳನ್ನು ಬಳಸಿಕೊಂಡಿಲ್ಲ. ಸರ್ಕಾರ ಬೀಳಿಸಲು ಹೊರಟಿರುವ ಬಿಜೆಪಿ ಶಾಸಕರಿಗೆ ಶ್ರೀಗಳು ತರಾಟೆ ತೆಗೆದುಕೊಂಡಿದ್ದಾರೆಂಬ ಅಂಶ ಸತ್ಯಕ್ಕೆ ದೂರವಾದುದು.
ಅವೆಲ್ಲಾ ಶುದಟಛಿ ಸುಳ್ಳು. ಇಂತಹ ಅಪಪ್ರಚಾರದಿಂದ ಶ್ರೀಗಳಿಗೆ ಹಾಗೂ ಮಠಕ್ಕೆ ಕೆಟ್ಟ ಹೆಸರು ಬರಲಿದೆ. ನಿರ್ಮಲಾನಂದನಾಥ ಶ್ರೀಗಳ ಹೆಸರನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಶ್ರೀಗಳು ಎಲ್ಲಾ ಸಮಾಜದ ರಕ್ಷಣೆಗಾಗಿ ಇದ್ದಾರೆ. ಒಂದು ಸಮಾಜದ ವ್ಯಕ್ತಿಗೋಸ್ಕರ ಶ್ರೀಗಳು ಯಾವತ್ತೂ ವಕಾಲತ್ತು ವಹಿಸುವುದಿಲ್ಲ ಎಂದು ಹೇಳಿದರು. ಮಂಡ್ಯ ಜಿಲ್ಲೆಯ ಜನ ನನಗೆ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ. ನನ್ನ ಜೀವಿತದ ಕೊನೆಯವರೆಗೂ ನಾನು ಆಭಾರಿಯಾಗಿದ್ದೇನೆ ಎಂದರು.