Advertisement

ಭಸ್ಮವಾದ ಬಾಗ್ಧಾದಿ

11:08 PM Oct 28, 2019 | mahesh |

ತನ್ನ ತೀವ್ರ ಕ್ರೌರ್ಯದಿಂದ, ಅತ್ಯಾಧುನಿಕ ಯುದ್ಧ ತಂತ್ರಗಳಿಂದ ಜಗತ್ತನ್ನು ಬೆಚ್ಚಿಬೀಳಿಸಿದ್ದ ಐಸಿಸ್‌ ಉಗ್ರ ಸಂಘಟನೆಗೆ ಈಗ ಬಹುದೊಡ್ಡ ಹೊಡೆತ ಬಿದ್ದಿದೆ. ಇಸ್ಲಾಮಿಕ್‌ ಸ್ಟೇಟ್‌/ ಐಸಿಸ್‌ನ ಮುಖ್ಯಸ್ಥ, ಕುಖ್ಯಾತ ಉಗ್ರ ಅಬು ಬಕ್ರ್ ಅಲ್‌ ಬಾಗ್ಧಾದಿ ಅಮೆರಿಕದ ಕಾರ್ಯಾಚರಣೆಯಲ್ಲಿ “ಛಿದ್ರವಾಗಿದ್ದಾನೆ’ ಎಂದು ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಬಾಗ್ಧಾದಿ “ನಾಯಿಯಂತೆ ಸತ್ತ’ ಎಂಬ ಅವರ ಸಂದೇಶವು, ಬಾಗ್ಧಾದಿಯ ಹಿಂಬಾಲಕರಿಗೆ ಕಳುಹಿಸಿರುವ ಸ್ಪಷ್ಟ ಸಂದೇಶವಾಗಿದೆ.

Advertisement

ಸಿರಿಯಾ, ಇರಾಕ್‌ ಸೇರಿದಂತೆ, ಮಧ್ಯಪ್ರಾಚ್ಯದ ಅನೇಕ ಭಾಗಗಳಲ್ಲಿ ಐಸಿಸ್‌ ಉಗ್ರರ ಹಾವಳಿ ಯಾವ ಮಟ್ಟದಲ್ಲಿ ಅತಿಯಾಗಿತ್ತೆಂದರೆ, ಆ ಭಾಗಗಳಲ್ಲಿನ ಯಾಜಿದಿ ಜನಾಂಗವೇ ಅವಸಾನದ ಅಂಚಿಗೆ ಬಂದುನಿಂತಿದೆ. ಶಿರಚ್ಛೇದನ, ಸಾಮೂಹಿಕ ಅತ್ಯಾಚಾರ, ಹತ್ಯೆಗಳು, ಬಾಂಬ್‌ ದಾಳಿಗಳ ಮೂಲಕ ಕ್ರೌರ್ಯ ಮೆರೆಯುತ್ತಿದ್ದ ಐಸಿಸ್‌ ಈಗ ಸಿರಿಯಾ ಮತ್ತು ಇರಾಕ್‌ನಿಂದ ನಿರ್ಮೂಲನೆಗೊಂಡಿದೆಯಾದರೂ, ಅದು ಮಾಡಿದ ಹಾನಿ ಸರಿಯಾಗಲು ದಶಕಗಳೇ ಆಗಬಹುದು. ಕೋಟ್ಯಂತರ ಜನರು ತಮ್ಮ ನೆಲೆ ತೊರೆದು ಪಾಶ್ಚಾತ್ಯ ದೇಶಗಳಿಗೆ ವಲಸೆ ಹೋಗಿದ್ದಾರೆ. ಲಕ್ಷಾಂತರ ನಾಗರಿಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ, ಸಾವಿರಾರು ಹೆಣ್ಣುಮಕ್ಕಳು ಅಪಹರಣಗೊಂಡು ಗುಲಾಮ ಮಾರುಕಟ್ಟೆಯಲ್ಲಿ ಉಗ್ರರಿಂದ ಖರೀದಿಯಾಗಿ ಬದುಕು ಕಳೆದುಕೊಂಡಿದ್ದಾರೆ. ಈಗ ಇರಾಕ್‌-ಸಿರಿಯಾದಲ್ಲಿ ನೆಲೆ ಕಳೆದುಕೊಂಡಿರುವ ಐಸಿಸ್‌ ಅನ್ಯ ದೇಶಗಳಲ್ಲಿ ನೆಲೆ ಹುಡುಕಲಾರಂಭಿಸಿದೆ(ಮುಖ್ಯವಾಗಿ ಆಫ್ಘಾನಿಸ್ತಾನದಲ್ಲಿ. ಕಾಶ್ಮೀರ ಮತ್ತು ಕೇರಳದಲ್ಲೂ ಅದರ ಪ್ರಭಾವ ಕಾಣಿಸಿಕೊಂಡಿದೆ). ಇಂಥ ಹೊತ್ತಲ್ಲೇ ಬಾಗ್ಧಾದಿ ಸತ್ತಿರುವುದು ಭಯೋತ್ಪಾದನೆಯ ವಿರುದ್ಧದ ಜಾಗತಿಕ ಸಮರಕ್ಕೆ ಸಿಕ್ಕ ದೊಡ್ಡ ಗೆಲುವೇ ಸರಿ…

ಯಾರು ಈ ಬಾಗ್ಧಾದಿ
ಬಾಗ್ಧಾದಿಯ ನಿಜವಾಜ ಹೆಸರು ಇಬ್ರಾಹಿಂ ಅವಾದ್‌ ಅಲ್‌-ಬದ್ರಿ. ಈತನ ಆರಂಭಿಕ ವರ್ಷಗಳ ಬಗ್ಗೆ ಮಾಹಿತಿ ಸರಿಯಾಗಿ ಲಭ್ಯವಿಲ್ಲವಾದರೂ ಇವನು ಬಾಲ್ಯದಿಂದ ಮೂಲಭೂತವಾದದತ್ತ ಆಕರ್ಷಿತನಾಗಿದ್ದ ಎನ್ನಲಾಗುತ್ತದೆ. ಬಾಗ್ಧಾದಿ ಬೆಳೆದು ನಿಲ್ಲಲು ಪರೋಕ್ಷವಾಗಿ ಅಮೆರಿಕವೇ ಕಾರಣವಾಯಿತು ಎನ್ನಲಾಗುತ್ತದೆ. ಉಗ್ರನಾಗಿ ಬಾಗ್ಧಾದಿ ರೂಪಾಂತರಗೊಂಡದ್ದರ ಹಿಂದೆ, ಅಮೆರಿಕ 2003ರಲ್ಲಿ ಇರಾಕ್‌ಗೆ ನುಗ್ಗಿದ್ದೇ ಪ್ರಮುಖ ಕಾರಣವಾಯಿತು.( ಸದ್ದಾಂ ಹುಸ್ಸೇನ್‌ನ ಆಡಳಿತವನ್ನು ಅಂತ್ಯಗೊಳಿಸುತ್ತೇವೆ, ಇರಾಕ್‌ ಸಾಮೂಹಿಕ ವಿನಾಶಕಾರಿ ಅಸ್ತ್ರಗಳನ್ನು ಹೊಂದಿದೆ ಎಂದು ಆ ದೇಶದ ಮೇಲೆ ಅಮೆರಿಕ ಆಕ್ರಮಣ ಮಾಡಿತ್ತು)

ಆಗ ಅಲ್‌-ಬಾಗ್ಧಾದಿ ಉಗ್ರ ಸಂಘಟನೆಯೊಂದನ್ನು ಹುಟ್ಟುಹಾಕಿದ ಎನ್ನಲಾಗುತ್ತದೆ. 2004ರಲ್ಲಿ ಅಮೆರಿಕನ್‌ ಪಡೆಗಳು ಬಾಗ್ಧಾದಿಯನ್ನು ಸೆರೆಹಿಡಿದು ಕುಖ್ಯಾತ ಅಬುಘೆùಬ್‌ ಮತ್ತು ಕ್ಯಾಂಪ್‌ ಬುಕ್ಕಾ ಬಂದೀಖಾನೆಯಲ್ಲಿಟ್ಟಿತು. ಅದೇ ವರ್ಷವೇ ಆತ ಮತ್ತು ಆತನ ಸಹಚರರ ಬಿಡುಗಡೆಯೂ ಆಯಿತು. 2006ರಲ್ಲಿ ಬಾಗ್ಧಾದಿಯ ಗುಂಪು, ಇತರೆ ಉಗ್ರಸಂಘಟನೆಗಳೊಂದಿಗೆ ಸೇರಿ “ಮುಜಾಹಿದ್ದೀನ್‌ ಶುರಾ’ ಎಂಬ ಒಕ್ಕೂಟವನ್ನು ಸ್ಥಾಪಿಸಿದವು. ಹಲವು ಇಸ್ಲಾಮಿಕ್‌ ಉಗ್ರಸಂಘಟನೆಗಳ ಈ ಮೈತ್ರಿಯನ್ನು ” ಅಲ್‌ಕೈದಾ ಇನ್‌ ಇರಾಕ್‌’ ಎಂದು ಕರೆಯಲಾಗುತ್ತಿತ್ತು.

ಅದ್ಹೇಗೆ ಬಾಗ್ಧಾದಿ ಇರಾಕ್‌ನ ಅಲ್‌ಕೈದಾ ಘಟಕದಲ್ಲಿ ಮೇಲೇರಿದನೋ ತಿಳಿಯದು, ಆದರೆ 2010ರಲ್ಲಿ ಬಾಗ್ಧಾದಿಯನ್ನು ಈ ಸಂಘಟನೆಯ ಮುಖ್ಯಸ್ಥನೆಂದು ಘೋಷಿಸಲಾಯಿತು. ಅಲ್‌ಕೈದಾ ಇನ್‌ ಇರಾಕ್‌ನ ನೇತೃತ್ವ ವಹಿಸಿಕೊಂಡದ್ದೇ ಅಲ್‌-ಬಾಗ್ಧಾದಿ, ಬಾಗ್ಧಾದ್‌ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿನ ಅಮೆರಿಕ ಪಡೆಗಳು, ಕ್ರಿಶ್ಚಿಯನ್ನರು, ಶಿಯಾ ಮುಸಲ್ಮಾನರು ಮತ್ತು ಖುದ್‌ì ಜನರು ಹಾಗೂ ಇರಾಕಿ ಭದ್ರತಾಪಡೆಗಳ ಮೇಲೆ ನಿರಂತರ ಬಾಂಬ್‌ ದಾಳಿಗಳು ನಡೆಯುವಂತೆ ಮಾಡಿದ. ಈತನ ಬೆಳೆಯುತ್ತಿರುವ ಪ್ರಭಾವವನ್ನು ಅರಿತ ಅಮೆರಿಕ, 2011ರಲ್ಲಿ ಜಾಗತಿಕ ಉಗ್ರ ಎಂದು ಘೋಷಿಸಿತು.

Advertisement

ಅಲ್‌ಕೈದಾದೊಂದಿಗೆ ಒಡಕು
ಬಾಗ್ಧಾದಿಯಡಿ ಇಸ್ಲಾಮಿಕ್‌ ಸ್ಟೇಟ್‌ ಬಹಳ ವೇಗವಾಗಿ ಇರಾಕ್‌ನ ಸುನ್ನಿ ಯುವಕರನ್ನು ಸೆಳೆಯಲಾರಂಭಿಸಿತು. ನೋಡನೋಡುತ್ತಿದ್ದಂತೆಯೇ ಇರಾಕ್‌ ಇಸ್ಲಾಮಿಕ್‌ ಉಗ್ರರ ಹಿಡಿತಕ್ಕೆ ಸಿಲುಕಿತು. ಅಲ್ಲಿಗೇ ನಿಲ್ಲದೇ ತನ್ನ ಉಗ್ರ ಜಾಲವನ್ನು ಸಿರಾಯಾಕ್ಕೂ ವಿಸ್ತರಿಸಲು ಮುಂದಾದ, ಸಿರಿಯಾದಲ್ಲಿದ್ದ ಅಲ್‌ಕೈದಾದ ಅಂಗವಾಗ ನುಸ್ರಾ ಸಂಘಟನೆಯು ತನ್ನೊಂದಿಗೆ ಕೈಜೋಡಿಸಿದೆ ಎಂದೂ ಘೋಷಿಸಿ, ಐಎಸ್‌ಐಐನ ಹೆಸರನ್ನು ಐಎಸ್‌ಐಎಸ್‌(ಇಸ್ಲಾಮಿಕ್‌ ಸ್ಟೇಟ್‌ ಇನ್‌ ಇರಾಕ್‌ ಆ್ಯಂಡ್‌ ಸಿರಿಯಾ) ಎಂದು ಬದಲಿಸಿದ.

ಬಾಗ್ಧಾದಿ, ನುಸ್ರಾ ಗುಂಪಿನೊಂದಿಗೆ ಕೈಜೋಡಿಸಿದ್ದು ಅಲ್‌ ಕೈದಾ ನಾಯಕ ಅಯ್ಮನ್‌ ಅಲ್‌ ಜವಾಹಿರಿಗೆ ಇಷ್ಟವಿರಲಿಲ್ಲ. ಅಲ್‌ ಬಾಗ್ಧಾದಿ ಸಿರಿಯಾಕ್ಕೆ ಕಾಲಿಡಬಾರದು ಎಂದು ಜವಾಹಿರಿ ಆಜ್ಞಾಪಿಸಿದ. ಕೂಡಲೇ ಬಾಗ್ಧಾದಿ ಅಲ್‌-ಕೈದಾದಿಂದ ಇಸ್ಲಾಮಿಕ್‌ ಸ್ಟೇಟ್‌ ದೂರವಾಗಿದೆ ಎಂದು ಘೋಷಿಸಿದ. ಜನವರಿ 2014ರಲ್ಲಿ ಐಸಿಸ್‌ ಸಿರಿಯಾದ ರಕ್ಕಾ ನಗರಿಯನ್ನು ಕೈವಶಮಾಡಿಕೊಂಡಿತು. ಅದೇ ವರ್ಷದ ಜೂನ್‌ ತಿಂಗಳಲ್ಲಿ ಇರಾಕ್‌-ಸಿರಿಯಾದ ಮೇಲೆ ಸಾಗರೋಪಾದಿಯಲ್ಲಿ ದಾಳಿ ಮಾಡಿ, ಬಹುತೇಕ ಭೂಪ್ರದೇಶವನ್ನು ಕೈವಶಮಾಡಿಕೊಂಡಿತು.

ಎರಡೂವರೆ ಲಕ್ಷಕ್ಕೂ ಅಧಿಕ ಉಗ್ರರು
ಜೂನ್‌ 29, 2014ರಂದು ಮೋಸೂಲ್‌ನ ಐತಿಹಾಸಿಕ ಮಸೀದಿಯಿಂದ ಭಾಷಣ ಮಾಡಿದ ಅಲ್‌ ಬಾಗ್ಧಾದಿ, ಜಗತ್ತಿನಾದ್ಯಂತ ಇಸ್ಲಾಮಿಕ್‌ ಖಲೀಫಾ ಸ್ಥಾಪನೆಯಾಗಿದೆ ಎಂದು ಘೋಷಿಸಿದ. ಅಂದಿನಿಂದ ಐಸಿಸ್‌ ಜಗತ್ತಿನಾದ್ಯಂತ ವೇಗವಾಗಿ ವಿಸ್ತರಿಸಲಾರಂಭಿಸಿತು. ಒಂದು ಸಮಯದಲ್ಲಿ 1000ಕ್ಕಿಂತಲೂ ಕಡಿಮೆ ಉಗ್ರರನ್ನು ಮುನ್ನಡೆಸುತ್ತಿದ್ದ ಬಾಗ್ಧಾದಿಯ ಹಿಂದೆ, 2015ರ ವೇಳೆಗೆ ಎರಡೂವರೆ ಲಕ್ಷಕ್ಕೂ ಅಧಿಕ ಉಗ್ರರಿದ್ದರು (70ಸಾವಿರಕ್ಕೂ ಅಧಿಕ ವಿದೇಶಿಯರು). ಇರಾಕ್‌ ಮತ್ತು ಸಿರಿಯಾ ಅಜಮಾಸು ಇವನ ಹಿಡಿತದಲ್ಲೇ ಸಿಲುಕಿಬಿಟ್ಟಿತ್ತು. ರಷ್ಯಾ, ಫ್ರಾನ್ಸ್‌, ಅಮೆರಿಕ, ಬ್ರಿಟನ್‌ನ ನೇತೃತ್ವದಲ್ಲಿ ನಿರಂತರವಾಗಿ ನಡೆದ ಕಾರ್ಯಾಚರಣೆಗಳ ಫ‌ಲವಾಗಿ ಇರಾಕ್‌ ಮತ್ತು ಸಿರಿಯಾದ ಮೇಲಿನ ಹಿಡಿತವನ್ನು ಐಸಿಸ್‌ ಕಳೆದುಕೊಂಡಿದೆ. ಆದರೂ ಇನ್ನೂ 18,000ಕ್ಕೂ ಹೆಚ್ಚು ಐಸಿಸ್‌ ಉಗ್ರರು ತಲೆಮರೆಸಿಕೊಂಡು ಸ್ಲಿàಪರ್‌ ಸೆಲ್‌ಗಳಾಗಿದ್ದಾರೆ ಎಂಬ ಎಚ್ಚರಿಕೆಯನ್ನೂ ಅಮೆರಿಕ ಕೊಟ್ಟಿದೆ.

ಇದಕ್ಕಿಂತಲೂ ಭಯಾನಕ ಅಂಶವೆಂದರೆ, ತಾನು ಅಪಹರಿಸಿದ ಮಕ್ಕಳಿಗೆಲ್ಲ ಐಸಿಸ್‌ ಬ್ರೇನ್‌ವಾಶ್‌ ಮಾಡಿದೆ. ಸಾವಿರಾರು ಯಾಜಿದಿ, ಶಿಯಾ-ಸುನ್ನಿ ಮಕ್ಕಳಿಗೆ ಐಸಿಸ್‌ ಉಗ್ರ ತರಬೇತಿ ನೀಡಿದೆ. ಈ ಮಕ್ಕಳನ್ನೆಲ್ಲ ಪತ್ತೆಹಚ್ಚಿ ಅವರನ್ನು ಸರಿದಾರಿಗೆ ತರುವುದು ಕಷ್ಟದ ಕೆಲಸವೇ ಸರಿ.

ಆಫ್ಘಾನಿಸ್ಥಾನವೇ ಮುಂದಿನ ಗುರಿ, ಭಾರತಕ್ಕೆ ವರಿ?
ಇರಾಕ್‌-ಸಿರಿಯಾ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ನೆಲೆ ಕಳೆದುಕೊಂಡಿರುವ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಈಗಾಗಲೇ ಆಫ್ಘಾನಿಸ್ಥಾನದಲ್ಲಿ ನೆಲೆ ಕಂಡುಕೊಳ್ಳಲಾರಂಭಿಸಿದೆ. ಈಗದು ಅಲ್‌ಕೈದಾ ಅಷ್ಟೇ ಅಲ್ಲದೆ ತಾಲಿಬಾನ್‌ ಜತೆಗೂ ಮೈತ್ರಿ ಮಾಡಿಕೊಂಡಿದೆ. ಆದರೆ ಅಮೆರಿಕ ಅಫ್ಘಾನಿಸ್ತಾನದಲ್ಲಿ ಇರುವವರೆಗೂ ಐಸಿಸ್‌ಗೆ ಬೆಳೆದು ನಿಲ್ಲಲು ಸಾಧ್ಯವಿಲ್ಲ. ಹೀಗಾಗಿ, ಅಮೆರಿಕ ಅಫ್ಘಾನಿಸ್ಥಾನದಿಂದ ಹೊರಹೋಗಲಿ ಎಂದು ಈ ಎಲ್ಲಾ ಉಗ್ರಸಂಘಟನೆಗಳು ಕಾದು ಕುಳಿತಿವೆ. ಸುದೈವವಶಾತ್‌, ಇತ್ತೀಚೆಗೆ ತಾಲಿಬಾನ್‌ನೊಂದಿಗಿನ ಅಮೆರಿಕದ ಮಾತುಕತೆಯು ಮುರಿದುಬಿದ್ದಿದ್ದು, ಪರಿಣಾಮವಾಗಿ, ತಾನು ಅಫ್ಘಾನಿಸ್ತಾನದಿಂದ ಹೊರಹೋಗುವುದಿಲ್ಲ ಎಂದು ಅಮೆರಿಕ ಹೇಳಿದೆ. ಈಗ ಅಲ್‌-ಬಗ್ಧಾದಿಯೂ ಅಂತ್ಯವಾಗಿದ್ದಾನಾದ್ದರಿಂದ, ಏಷ್ಯಾದಲ್ಲಿ ಬೆಳೆಯಬೇಕೆಂಬ ಐಸಿಸ್‌ನ ಗುರಿ ಧೂಳಿಪಟವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ರಕ್ಷಣಾ ಪರಿಣತರು. ಆದಾಗ್ಯೂ, ಭಾರತದಲ್ಲೂ ಐಸಿಸ್‌ಗೆ ಆಕರ್ಷಿತರಾಗಿ ಮಧ್ಯಪ್ರಾಚ್ಯಕ್ಕೆ ಹೋದವರೂ ಇದ್ದಾರೆ (ಮುಖ್ಯವಾಗಿ ಕೇರಳದಿಂದ). ಇನ್ನು ಕಾಶ್ಮೀರದಲ್ಲಿ ಐಸಿಸ್‌ ತನ್ನ ಘಟಕ ಸ್ಥಾಪಿಸಿರುವುದಾಗಿ ಘೋಷಿಸಿತ್ತಾದರೂ, ಅದರ ಬೆಳವಣಿಗೆಯನ್ನು ಚಿಗುರಿನಲ್ಲೇ ಚಿವುಟಿ ಹಾಕುವಲ್ಲಿ ನಮ್ಮ ಭದ್ರತಾಪಡೆಗಳು ಯಶಸ್ವಿಯಾಗಿವೆ.

ಎಲ್ಲಿದೆ ಐಸಿಸ್‌ ಹಾವಳಿ
ಇರಾಕ್‌, ಸಿರಿಯಾ, ಅಫ್ಘಾನಿಸ್ತಾನ, ಲಿಬ್ಯಾ, ಜೋರ್ಡನ್‌, ಟರ್ಕಿ, ನೈಜೀರಿಯಾ, ಯೆಮೆನ್‌, ಈಜಿಪ್ತ್, ಸೊಮಾಲಿಯಾ, ಪಾಕಿಸ್ತಾನ, ಫಿಲಿಪ್ಪೀನ್ಸ್‌, ಕಾಂಗೋ, ಬಾಂಗ್ಲಾದೇಶ, ಶ್ರೀಲಂಕಾ, ಜಮ್ಮು-ಕಾಶ್ಮೀರ(ಆರಂಭಿಕ ಹಂತದಲ್ಲಿ).

ಐಸಿಸ್‌ನಿಂದ ಹಾಳಾದ ಬದುಕು
ದಶಕಗಳಿಂದಲೂ ತೈಲ ಸಂಪತ್ತಿನ ಮೇಲಿನ ಹಿಡಿತಕ್ಕಾಗಿ ಸಂಘರ್ಷದ ಗೂಡಾಗಿದ್ದ ಸಿರಿಯಾ ಮತ್ತು ಇರಾಕ್‌ಗೆ ಐಸಿಸ್‌ ಮತ್ತಷ್ಟು ಹಾನಿ ಮಾಡಿತು. ಲಕ್ಷಾಂತರ ಜನರು ಐಸಿಸ್‌ ಉಗ್ರರಿಂದಾಗಿ ಐರೋಪ್ಯ ರಾಷ್ಟ್ರಗಳಿಗೆ ನಿರಾಶ್ರಿತರಾಗಿ ಓಡಿಹೋಗಿದ್ದಾರೆ. ಅಲ್ಲಿನ ನಿರಾಶ್ರಿತರ ಶಿಬಿರಗಳಲ್ಲಿ ದಿಕ್ಕುತೋಚದೆ ಉಳಿದುಕೊಂಡಿದ್ದಾರೆ. ಈ ನಿರಾಶ್ರಿತರ ಒಳಗೂ ಐಸಿಸ್‌ ಸ್ಲಿàಪರ್‌ ಸೆಲ್‌ಗಳು ಇವೆಯೆಂಬ ಭಯ ಐರೋಪ್ಯ ರಾಷ್ಟ್ರಗಳಿಗಿದ್ದು, ಈ ನಿರಾಶ್ರಿತರಿಗೆ ನೆಲೆ ಒದಗಿಸಬೇಕೋ ಬೇಡವೋ ಎನ್ನುವ ವಿಚಾರದಲ್ಲಿ ಜನಸಾಮಾನ್ಯರು ಮತ್ತು ಸರ್ಕಾರಗಳ ನಡುವೆ ವಾದ-ವಿವಾದ ನಡೆದೇ ಇದೆ.

ಐಸಿಸ್‌ ಹೆಡೆಮುರಿ ಕಟ್ಟಿದ್ಯಾರು?
ಐಸಿಸ್‌ ವಿರುದ್ಧದ ಹೋರಾಟದಲ್ಲಿ ಅರಬ್‌ ರಾಷ್ಟ್ರಗಳನ್ನೂ ಒಳಗೊಂಡು 50ಕ್ಕೂ ಹೆಚ್ಚು ರಾಷ್ಟ್ರಗಳು ಭಾಗಿಯಾಗಿವೆ. ಇವುಗಳ ನೇತೃತ್ವವನ್ನು ಅಮೆರಿಕ ವಹಿಸಿಕೊಂಡಿದೆ. ಇನ್ನೊಂದೆಡೆ ರಷ್ಯಾ, ಇರಾನ್‌ ಮತ್ತು ಲೆಬನಾನ್‌ನ ಶಿಯಾ ಮೈತ್ರಿಪಡೆ ಹೆಜೊºಲ್ಲಾ ಸಿರಿಯನ್‌ ಸರ್ಕಾರದ ಪರ ಇದ್ದು, ಅವೂ ಕೂಡ ಐಸಿಸ್‌ ವಿರುದ್ಧ ಹೋರಾಡುತ್ತಿವೆ. ಇನ್ನು ಪ್ರಾದೇಶಿಕ ಮಿಲಿಟರಿ ಪಡೆಗಳಾದ ಕುರ್ದಿಷ್‌ ಪೇಶ್ಮಾರ್ಗಾ ಮತ್ತು ಅಮೆರಿಕ ಬೆಂಬಲಿದ ಸಿರಿಯಾದ ಯಾಜೀದಿ ಯೋಧರು ಐಸಿಸ್‌ ವಿರುದ್ಧ ಹೋರಾಡುತ್ತಿದ್ದಾರೆ.

ಐಸಿಸ್‌ಗೆ ಹಣವೆಲ್ಲಿಂದ ಬರುತ್ತಿತ್ತು?
ತೈಲ ಮತ್ತು ಅನಿಲವೇ ಐಸಿಸ್‌ನ ಪ್ರಮುಖ ಆದಾಯ ಮೂಲವಾಗಿತ್ತು. ಒಂದು ಸಮಯದಲ್ಲಂತೂ ಸಿರಿಯಾದ ಮುಕ್ಕಾಲು ಪ್ರತಿಶತದಷ್ಟು ತೈಲ ಉತ್ಪಾದನೆ ಐಸಿಸ್‌ ಹಿಡಿತದಲ್ಲಿತ್ತು. ಈಗ ಅಮೆರಿಕ ಮತ್ತು ಸಿರಿಯನ್‌ ಪಡೆಗಳು ಎಲ್ಲಾ ತೈಲ ಬಾವಿಗಳನ್ನೂ ವಶಕ್ಕೆ ಪಡೆದಿವೆ. ಇದಷ್ಟೇ ಅಲ್ಲದೇ, ವಿದೇಶಗಳಿಂದಲೂ ಐಸಿಸ್‌ ಉಗ್ರರಿಗೆ ಹಣದ ಸಹಾಯ ಸಿಗುತ್ತಿತ್ತು. ಇನ್ನು ಮುಸ್ಲಿಮೇತರರ ಮೇಲೆ ತೆರಿಗೆ, ಲೂಟಿ, ಅಪಹರಣ, ಪ್ರಾಚ್ಯವಸ್ತುಗಳ ಮಾರಾಟವೂ ಐಸಿಸ್‌ನ ಆದಾಯ ಮೂಲವಾಗಿತ್ತು.

ಭಯವೇ ಬಂಡವಾಳ
ಐಸಿಸ್‌ ಉಗ್ರಸಂಘಟನೆ ಮುಖ್ಯ ಉದ್ದೇಶ ಇಸ್ಲಾಮಿಕ್‌ ಖಲೀಫ‌ತ್‌ ಸ್ಥಾಪಿಸುವುದಾಗಿತ್ತು. ಹೀಗಾಗಿ, ಅನ್ಯ ಧರ್ಮಗಳ ವಿನಾಶವೂ ಅದರ ಮುಖ್ಯ ಗುರಿಯಾಗಿತ್ತು. ಈ ಕಾರಣದಿಂದಲೇ ಅದು ಸಿರಿಯಾ ಮತ್ತು ಇರಾಕ್‌ನಲ್ಲಿನ ಅನ್ಯ ಧರ್ಮಗಳ “ಸಾಂಸ್ಕೃತಿಕ’ ಕುರುಹನ್ನೆಲ್ಲ ವಿನಾಶ ಮಾಡಿತು. ಶಿಯಾ, ಯಾಜಿದಿಗಳು, ವಿದೇಶಿಯರ ಶಿರಚ್ಚೇದನ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟು ಭಯ ಸೃಷ್ಟಿಸುತ್ತಿತ್ತು. ಅಲ್ಲದೇ, ಸೋಷಿಯಲ್‌ ಮೀಡಿಯಾಗಳ ಮೂಲಕ ಮತಾಂಧರನ್ನು ಸೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿತ್ತು.

ಲೈಂಗಿಕ ಗುಲಾಮರು
ಯಾಜಿದಿಗಳು ಸೇರಿದಂತೆ, ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳ ಸಾವಿರಾರು ಹೆಣ್ಣುಮಕ್ಕಳನ್ನು ಐಸಿಸ್‌ ಉಗ್ರರು ಅಪಹರಿಸಿ ಗುಲಾಮ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಹೆಣ್ಣುಮಕ್ಕಳನ್ನೆಲ್ಲ ಲೈಂಗಿಕ ಗುಲಾಮರಂತೆ ಬಳಸಿಕೊಳ್ಳಲಾಯಿತು. ಅನೇಕರು ಈ ಯಾತನೆ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡರೆ, ಇನ್ನೂ ಅನೇಕರನ್ನು ಉಗ್ರರೇ ಕೊಂದುಹಾಕಿದ್ದಾರೆ. ಅನೇಕ ಯಾಜಿದಿ ಹೆಣ್ಣುಮಕ್ಕಳನ್ನು ಉಗ್ರರ ಕಪಿಮುಷ್ಟಿಯಿಂದ ಬಿಡಿಸಲು ಅಮೆರಿಕನ್‌ ಪಡೆಗಳು ಯಶಸ್ವಿಯಾಗಿವೆಯಾದರೂ, ಈ ಹೆಣ್ಣುಮಕ್ಕಳಿಗೆ ಈಗ ಯಾರೂ ಇಲ್ಲ, ಅವರ ಮನೆಯವರನ್ನೆಲ್ಲ ಉಗ್ರರು ಎಂದೋ ಕೊಂದುಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next