ನಂಜನಗೂಡು: ಒಂದೆಡೆ ಉಪ ಚುನಾವಣೆಯ ಪ್ರಚಾರದ ಬಿರುಸು, ಇನ್ನೊಂದೆಡೆ ಸುಡು ಬಿಸಿಲಿನ ಧಗೆಯೂ ಜೋರು ಈ ಎರಡರ ಮಧ್ಯೆ ಬಸವಳಿಯುತ್ತಿರುವ ಜನ ನಾಯಕರೀಗ ಉರಿಬಿಸಿಲಿನ ಶಾಖ ತಡೆಯಲಾಗದೆ ತೋಟದ ಮನೆಯತ್ತ ಮುಖ ಮಾಡಲಾರಂಭಿಸಿದ್ದಾರೆ.
ಸೋಮವಾರ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ನಿರತರಾಗಿದ್ದರು, ಕಾಂಗ್ರೆಸ್ ಪರ ಮಾಜಿ ಕೇಂದ್ರ ಸಚಿವ ಮುನಿಯಪ್ಪ, ಸತೀಶ ಜಾರಕಿ ಹೊಳಿ, ಪ್ರಕಾಶ ಹುಕ್ಕೇರಿ ನಂಜನಗೂಡಿಗೆ ಆಗಮಿಸಿ ಕ್ಷೇತ್ರದ ವಿವಿಧೆಡೆ ತಮ್ಮ ಸಮಾಜದ ಕೇರಿಗಳಿಗೆ ತೆರಳಿ ಕೈ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಪರ ಪ್ರಚಾರ ಮಾಡುತ್ತ ತಮ್ಮ ಜನಾಂಗದ ಮತಗಳ ಕ್ರೂಡೀಕರಣಕ್ಕೇ ಪ್ರಯಾಸ ಪಡುತ್ತಿದ್ದರೆ,
ಇತ್ತ ಬಿಜೆಪಿ ತಾನೇನು ಕಡಿಮೆ ಎನ್ನುತ್ತ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ , ಶ್ರೀ ರಾಮುಲು, ನಾರಾಯಣ ಸ್ವಾಮಿ, ಎಸ್.ರಾಮದಾಸ್, ಕೇಂದ್ರ ಸಚಿವ ರಮೇಶ ಜಿಗಜಣಿಗಿ, ಸದಾನಂದ ಗೌಡ ಸೇರಿದಂತೆ ಜಾತಿವಾರು ನಾಯಕರನ್ನು ಕಲೆ ಹಾಕಿ ಕ್ಷೇತ್ರದಲ್ಲಿ ಜಾತಿವಾರು ಗ್ರಾಮ ಹಾಗೂ ಅಲ್ಲಿನ ಬೀದಿಗಳಲ್ಲಿ ರೋಡ್ ಶೋ ಮಾಡಿಸಿ ಮತಕಬಳಿಕೆಯ ಯತ್ನ ನಡೆಸಿದರು.
ಸಚಿವ ಡಾ.ಎಚ್.ಸಿ ಮಹದೇವಪ್ಪ ಹಾಗೂ ಸಂಸದ ಆರ್.ಧ್ರುವನಾರಾಯಣ ಕ್ಷೇತ್ರ ಸಂಚಾರ ಮುಗಿಸಿದ್ದು ಏನಾದರೂ ಆಗಲಿ ಪ್ರಸಾದರನ್ನು ಈ ಬಾರಿ ಮಣಿಸಿ ಅದರ ಲಾಭ ಪಡೆಯಲೇ ಬೇಕೆಂಬ ಗುರಿಯೊಂದಿಗೆ ಸಕಲ ಸಿದ್ಧತೆಗಳೊಂದಿಗೆ ಸೋಮವಾರದಿಂದ ಕೈ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಹುಟ್ಟೂರು ಕಳಲೆಯಿಂದ ಮೂರನೇ ಸುತ್ತಿನ ಪ್ರವಾಸ ಪ್ರಾರಂಭಿಸಿದ್ದಾರೆ.
ಮಾ.31 ರಿಂದ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಪ್ರವಾಸ ಮಾಡುವ ವೇಳೆಗೆ ಇಲ್ಲಿನ ಚುನಾವಣಾ ಅಖಾಡವನ್ನು ಕೈ ಪರವಾಗಿ ಸಿದ್ದಪಡಿಸಲು ಹರ ಸಾಹಸ ಸಹಾಸ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಈಗಾಗಲೇ ನಂಜನಗೂಡಿನ 28 ತಾಪಂಗಳನ್ನೂ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದರನ್ನು ಕಟ್ಟಿಕೊಂಡೇ ಸುತ್ತಿದ್ದು ಏ.1 ರಿಂದ ಪ್ರತಿ ಗ್ರಾಮದ ಬೀದಿ ಬೀದಿಯಲ್ಲಿ ಪಾದಯಾತ್ರೆ ನಡೆಸಿ ಹೇಗಾದರೂ ಮಾಡಿ ಪ್ರಸಾದರನ್ನು ಗೆಲ್ಲಿಸುವುದರ ಮುಖಾಂತರ ಈ ಭಾಗದಲ್ಲಿ ಬಿ ಜೆಪಿ ಗೊಂದು ಭದ್ರವಾದ ಬುನಾದಿ ನಿರ್ಮಿಸಿಕೊಡುವ ಹುನ್ನಾರ ನಡೆಸುತ್ತಿದ್ದಾರೆ.
ಬೀದಿ ಬೀದಿ ಸುತ್ತಿ ಬಸವಳಿದ ನಾಯಕರಿಗ ಈ ಬಿಸಲಿನ ದಗೆ ತಪ್ಪಿಸಿಕೊಳ್ಳಲು ಆಯಾ ಬೀದಿಗಳ ಮತದಾರರನ್ನು ಆಯಾ ಗ್ರಾಮಗಳ ತೋಟದತ್ತ ಕರೆಸಿ ಅಲ್ಲಿ ಚಿಕ್ಕದಾದ ಸಭೆನಡೆಸಿ ಚೊಕ್ಕವಾಗಿ ವ್ಯವಹಾರ ಕುದುರಿಸುವ ಯತ್ನ ನಡೆಸುತ್ತಿದ್ದಾರೆ.