Advertisement

35 ವರ್ಷದ ಸೇವಾನುಭವದಿಂದ ಕಾಲಮಿತಿಯೊಳಗೆ ಹೆಗ್ಗುರುತು ಮೂಡಿಸುವೆ

10:59 PM Apr 10, 2024 | Team Udayavani |

ಮೂಲತಃ ಬೆಂಗಳೂರಿನವರಾದ ಜಿ. ಕುಮಾರ ನಾಯಕ ನಿವೃತ್ತ ಐಎಎಸ್‌ ಅಧಿಕಾರಿ. ಸರಕಾರದ ವಿವಿಧ ಇಲಾಖೆಗಳಲ್ಲಿ 35 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಶಾಸಕಾಂಗ ವ್ಯವಸ್ಥೆಯ ಆಳ ಅಗಲದ ಪರಿಯಚವೂ ಅವರಿಗಿದೆ. ಈ ಹಿಂದೆ ರಾಯಚೂರು ಡಿಸಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಈಗ ರಾಯಚೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ.

Advertisement

ನಿಮ್ಮ ಜೀವನದಲ್ಲೇ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ ?
ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಲು ಹೆಮ್ಮೆ ಎನಿಸುತ್ತದೆ. ಮೊದಲ ಬಾರಿಗೆ ಕಣಕ್ಕಿಳಿದಿರುವುದರಿಂದ ಉತ್ಸಾಹವೂ ಇದೆ, ಕುತೂಹಲವೂ ಇದೆ. ಅದರ ಜತೆಗೆ ಸಾಕಷ್ಟು ನಿರೀಕ್ಷೆಗಳಿವೆ.

ಚುನಾವಣೆಗೆ ಸ್ಪರ್ಧಿಸಬೇಕೆಂದು ನಿಮಗೆ ಅನ್ನಿಸಿದ್ದು ಯಾವಾಗ, ಯಾಕೆ ಮತ್ತು ಏನು ಪ್ರೇರಣೆ?
ಐಎಎಸ್‌ ಅಧಿಕಾರಿಯಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ. ಜನಪರ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತಲ್ಲ ಎಂದು ಸಾಕಷ್ಟು ಬಾರಿ ಅನಿಸಿದ್ದಿದೆ. ಇನ್ನೂ ಉತ್ತಮ ಆಡಳಿತ ನೀಡಬೇಕು ಎಂದಾಗ ನಾವು ಅದರ ಭಾಗವಾಗಿರಬೇಕು. ಅಲ್ಲದೇ, 35 ವರ್ಷಗಳ ಸೇವಾನುಭವವನ್ನು ಸಮಾಜಕ್ಕಾಗಿ ವಿನಿಯೋಗಿಸಲು ರಾಜಕೀಯಕ್ಕೆ ಇಳಿದಿದ್ದೇನೆ. ಪ್ರೇರಣೆ ಎಂದಾಗ ಗಾಂಧೀಜಿ, ನೆಹರು, ದೇವರಾಜ ಅರಸು, ಹಾವನೂರು ಅಂಥ ಮಹನೀಯರು ಪ್ರಭಾವ ಬೀರುತ್ತಾರೆ.

ಮೊದಲ ಪ್ರಯತ್ನದಲ್ಲೇ ನೀವು ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ. ನಾನು ಅಂದುಕೊಂಡ ಗುರಿ ತಲುಪಲು ನನಗಿರುವ ಕಾಲಾವಕಾಶ ಕೂಡ ಕಡಿಮೆಯೇ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಕಾಲಮಿತಿಯೊಳಗೆ ಹೆಗ್ಗುರುತು ಮೂಡಿಸುವ ಕೆಲಸ ಮಾಡಬೇಕಿದೆ. ನನ್ನ ಸೇವಾವಧಿಯಲ್ಲಿ ರಾಜಕಾರಣಿಗಳ ಜತೆಗೆ ಕೆಲಸ ಮಾಡಿದ್ದರಿಂದ ರಾಜಕೀಯ ಅನುಭವ ಸಾಕಷ್ಟಿದೆ.

ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು ?
ಪಕ್ಷ ನನ್ನನ್ನು ಗುರುತಿಸಿ ಟಿಕೆಟ್‌ ನೀಡಿದೆ ಎಂದರೆ ನನ್ನ ಧ್ಯೇಯೋದ್ದೇಶಗಳ ಬಗ್ಗೆ ತಿಳಿದುಕೊಂಡಿರುತ್ತದೆ. ಅಲ್ಲದೇ, ನಾನು ಕೇವಲ ಕುಮಾರ ನಾಯಕ ಮಾತ್ರವಾಗಿರದೆ ಕಾಂಗ್ರೆಸ್‌ನ ಪ್ರತಿನಿಧಿ ಯಾಗಿರುವುದರಿಂದ ಮತದಾರರು ಗೆಲ್ಲಿಸುವ ವಿಶ್ವಾಸವಿದೆ.

Advertisement

ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? 5 ಕಾರಣ ಹೇಳಿ
ಚುನಾವಣೆ ಯುದ್ಧವಿದ್ದಂತೆ. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರರಂಥ ನಾಯಕರು ಬಲಿಷ್ಠರಾಗಿದ್ದು, ವಿಪಕ್ಷವನ್ನು ಎದುರಿಸಲು ಸನ್ನದ್ಧವಾಗಿದ್ದೇವೆ. ಕಾಂಗ್ರೆಸ್‌ ನೀಡಿದ್ದ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿರುವುದರಿಂದ ಜನರಿಗೆ ವಿಶ್ವಾಸ ಮೂಡಿದೆ. ಕೇಂದ್ರದಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಪ್ರಗತಿ ಸಾಧ್ಯವಾಗಲಿದೆ. ದೇಶದಲ್ಲಿ ವಿವಿಧ ಕೋಮುಗಳ ನಡುವೆ ಮೂಡುತ್ತಿರುವ ಅಪನಂಬಿಕೆ, ದ್ವೇಷ ತಡೆಯಬೇಕಾದರೆ ಕಾಂಗ್ರೆಸ್‌ ಗೆಲ್ಲಲೇಬೇಕಿದೆ.

ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕು ಅಂತ ಇದ್ದೀರಿ ?
ಜಿಲ್ಲೆಯ ಬಹುದಿನಗಳ ಕನಸಾಗಿರುವ ಏಮ್ಸ್‌, ವಿಮಾನ ನಿಲ್ದಾಣ, ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಜಾರಿ ಮಾಡುವುದೇ ಮೊದಲಾದ್ಯತೆ. ಸಂಸದೀಯ ಚಟುವಟಿಕೆಗಳಲ್ಲಿ ಕ್ಷೇತ್ರದ ಪಾತ್ರವನ್ನು ಉಲ್ಲೇಖೀಸಿ ಸಿಗಬೇಕಾದ ಸೌಲಭ್ಯ ಪಡೆಯುವುದಕ್ಕೇ ನನ್ನ ಆದ್ಯತೆ.

ಗೆದ್ದರೆ ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು?
ಮಹತ್ವಾಕಾಂಕ್ಷಿ ಜಿಲ್ಲೆಯಾಗಿರುವ ರಾಯಚೂರು-ಯಾದಗಿರಿ ಲೋಕಸಭೆ ಕ್ಷೇತ್ರವನ್ನು ಮಾದರಿ ರೀತಿಯಲ್ಲಿ ರೂಪಿಸಲು ಆದ್ಯತೆ. ನನ್ನದೇಯಾದ ಚಿಂತನೆಯೊಂದಿಗೆ ಕ್ಷೇತ್ರದ ಪ್ರಗತಿಗೆ ವೇಗೋತ್ಕರ್ಷ ನೀಡಲಾಗುವುದು.

ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸುಗಳೇನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
– ಏಮ್ಸ್‌ ಸ್ಥಾಪನೆ, ಅಪೌಷ್ಟಿಕ ನಿವಾರಣೆ, ನೀರಾವರಿ ಯೋಜನೆಗಳಿಗೆ ಉತ್ತೇಜನ, ರೈಲ್ವೆ ಯೋಜನೆಗಳಿಗೆ ವೇಗ, ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಉದ್ಯಮ-ಉದ್ಯೋಗ ಸೃಜನೆಗೆ ಒತ್ತು ನೀಡಲಾಗುವುದು.

ಚುನಾವಣೆ ವೇಳೆ ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ, ಸ್ಪರ್ಧಾತ್ಮಕ ಸಂಘರ್ಷ ಸಹಜ. ಚುನಾವಣೆ ಎಂದು ಬಂದಾಗ ಎಲ್ಲ ನಾಯಕರ ಮೊದಲ ಆದ್ಯತೆ ಪಕ್ಷದ ಅಭ್ಯರ್ಥಿ ಗೆಲ್ಲಿಸುವುದೇ ಆಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು.

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next