Advertisement

ಸ್ತ್ರೀಯರಿಗೂ ಮಂತ್ರದೀಕ್ಷೆ

08:25 PM Dec 29, 2019 | Lakshmi GovindaRaj |

ಪೇಜಾವರ ಶ್ರೀಗಳು ಉಮಾಭಾರತಿಯವರಿಗೆ ಸನ್ಯಾಸದೀಕ್ಷೆ ಕೊಟ್ಟದ್ದು ಮಾತ್ರವಲ್ಲ ಅದಕ್ಕೂ ಹಿಂದೆ ವಾರಿಜಾಕ್ಷಿ ಎಂಬ ಉಡುಪಿ ಮೂಲದ ಮಹಿಳೆಗೆ ದೀಕ್ಷೆ ನೀಡಿ ಸುಭದ್ರಾಮಾತಾ ಎಂದು ನಾಮಕರಣಗೊಳಿಸಿದ್ದರು. ಉಮಾಭಾರತಿಯವರು ಹಿಂದುಳಿದ ವರ್ಗಕ್ಕೆ ಸೇರಿದವರು, ಮಧ್ಯ ಭಾರತದವರು. ಪ್ರತಿ ವರ್ಷ ಗುರುಪೂರ್ಣಿಮೆ ದಿನ ಪೇಜಾವರ ಶ್ರೀಗಳು ಎಲ್ಲಿದ್ದಾರೋ ಅಲ್ಲಿಗೆ ಬಂದು ಗೌರವ ಸಮರ್ಪಿಸುತ್ತಿದ್ದರು.

Advertisement

ಪೇಜಾವರ ಶ್ರೀಗಳ ಐದನೆಯ ಪರ್ಯಾಯೋತ್ಸವದಲ್ಲಿ ಪಾಲ್ಗೊಂಡ ಉಮಾಭಾರತಿಯವರು ಬಳಿಕ ಅವರು ಅನಾರೋಗ್ಯಕ್ಕೆ ಈಡಾದಾಗಲೂ ಆಗಮಿಸಿದ್ದರು. ಒಮ್ಮೆ ಶ್ರೀಕೃಷ್ಣಜನ್ಮಾಷ್ಟಮಿಯ ಸಂದರ್ಭ ಆಗಮಿಸಿ ಕೃಷ್ಣಾಘ ಪ್ರದಾನ ಮಾಡಿದ್ದರು. ದಿಲ್ಲಿಯಲ್ಲಿ ಕಾರ್ಯಕ್ರಮ ನಿಗದಿಪಡಿಸಿ ಅಲ್ಲಿ ಸ್ವಾಮೀಜಿಯವರನ್ನು ಗೌರವಿಸಿದ್ದೂ ಇದೆ. ಸ್ತ್ರೀಯರಿಗೆ ಸನ್ಯಾದೀಕ್ಷೆ ಕೊಟ್ಟ ಕುರಿತು ಅನೇಕರು ಪ್ರಶ್ನಿಸಿದಾಗ “ಸ್ತ್ರೀಯರೂ ಸನ್ಯಾಸಿಗಳಾದ ಕುರಿತು ಅನೇಕ ಉದಾಹರಣೆಗಳು ಮಹಾಭಾರತದಲ್ಲಿ ಇವೆ.

ನಾನು ಇದನ್ನೆಲ್ಲ ಪರಿಶೀಲಿಸಿ ಶಾಸ್ತ್ರ ಸಂಪ್ರದಾಯಗಳಿಗೆ ಸಮ್ಮತವಾಗುವ ರೀತಿಯಲ್ಲಿ ದೀಕ್ಷೆ ನೀಡಿದ್ದೇವೆ’ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದರು. ಮಧ್ಯಪ್ರದೇಶದ ತಿಕಮ್‌ಗಢ ಜಿಲ್ಲೆಯ ದುಂಡ ಮೂಲದ ಉಮಾಭಾರತಿಯವರು 1959ರಲ್ಲಿ ಜನಿಸಿದರು. 1992ರಲ್ಲಿ ಅಯೋಧ್ಯಾ ಕಾರ್‌ಸೇವೆ ಸಂದರ್ಭ ಉಮಾಭಾರತಿಯವರಿಗೆ ಪೇಜಾವರ ಶ್ರೀಗಳ ಪರಿಚಯವಾಯಿತು. ಆ ಪರಿಣಾಮ 1992ರಲ್ಲಿಯೇ ಅವರು ಸನ್ಯಾಸದೀಕ್ಷೆಯನ್ನು ಪಡೆದರು. ಬಳಿಕ ಇವರ ಹೆಸರು ಉಮಾಶ್ರೀಭಾರತಿ ಎಂದಾಯಿತು.

ಉಮಾಭಾರತಿಗೆ ಮುನ್ನ: ಪೇಜಾವರ ಶ್ರೀಪಾದರು ಉಮಾಭಾರತಿಗೆ ಸನ್ಯಾಸದೀಕ್ಷೆ ನೀಡು ವುದಕ್ಕೂ ಮುನ್ನವೇ 1970ರ ವೇಳೆಗೆ ವಾರಿಜಾಕ್ಷಿ ಎಂಬವರಿಗೆ ದೀಕ್ಷೆ ನೀಡಿದ್ದರು. ಭಕ್ತಿ ದೀಕ್ಷೆ ಕೊಟ್ಟು ಇರಿಸಿದ ಹೆಸರು ಸುಭದ್ರಾ. ಇವರು ಉತ್ತರ ಭಾರತದಲ್ಲಿ ಸುಭದ್ರಾ ಮಾತಾ ಎಂದೇ ಹೆಸರುವಾಸಿ. ಉತ್ತರ ಭಾರತದ ಗಂಗೋತ್ರಿಯಿಂದ ಗೋಮುಖಕ್ಕೆ 19 ಕಿ.ಮೀ. ದೂರ ಇದೆ.

ಗೋಮುಖದಿಂದ ಸುಮಾರು 2,000 ಅಡಿ, ಸಮುದ್ರಮಟ್ಟದಿಂದ 14,640 ಅಡಿ ಎತ್ತರದಲ್ಲಿರುವ ತಪೋವನದ ಗುಹೆಗೆ ಪ್ರವಾಸಿಗರು ಹೋಗುವುದು ಕೆಲವೇ ತಿಂಗಳು. ಜುಲೈನಿಂದ ಆಗಸ್ಟ್‌, ಸೆಪ್ಟೆಂಬರ್‌ವರೆಗೆ ಹಿಮ ಕರಗಿ ನೆಲ ತೋರುತ್ತದೆ. ಅದು ಬಿಟ್ಟರೆ ಸದಾ ಹಿಮಪಾತ. ಈ ತಪೋವನದ ಗುಹೆಯಲ್ಲಿ 9 ವರ್ಷ ಇದ್ದು ತಪಸ್ಸು ಮಾಡಿದ ಸಾಧಕಿ ಸುಭದ್ರಾ ಅವರು ತಪೋವನಿ ಮಾತಾ ಎಂದೇ ಪ್ರಸಿದ್ಧರಾದರು. ಇವರಿಗೂ ಈಗ ಹೆಚ್ಚು ಕಡಿಮೆ 90 ವರ್ಷ ವಯಸ್ಸು.

Advertisement

ಆತ್ಮ-ತಪೋಬಲ: ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಮಿತಾಹಾರಿಯಾಗಿದ್ದವರು, ಕೆಲವೇ ಗಳಿಗೆಗಳ ನಿದ್ದೆ, ಕಿರಿದಾದ ಶರೀರ. ಆದರೆ ಕಾರ್ಯಚಟುವಟಿಕೆಗಳದು ಭೌಮವ್ಯಾಪ್ತಿ. ಇದಕ್ಕೆ ಮನೋಬಲ, ಸಂಕಲ್ಪ ಮತ್ತು ಶ್ರದ್ಧೆಗಳೇ ಕಾರಣವಾಗಿದ್ದವು ಎಂದರೆ ಅತಿಶಯೋಕ್ತಿ ಆಗದು. ಪ್ರಾಯಃ ಆತ್ಮಬಲ ಮತ್ತು ತಪೋಬಲ ಎನ್ನುವುದೇ ಶ್ರೀಗಳ ಕೆಲಸ ಕಾರ್ಯಗಳನ್ನು ವ್ಯಾಖ್ಯಾನಿಸಲು ಸೂಕ್ತವಾದ ಪದಗಳು.

ಪೇಜಾವರ ಪ್ರಭೆಪೇಜಾವರ ಶ್ರೀಗಳ ಸಾಧನೆಗಳು ನೂರಾರು. ಕೆಲವು ಪ್ರಮುಖ ಘಟನೆಗಳನ್ನು ಸಂಕ್ಷಿಪ್ತವಾಗಿ ಗಮನಿಸೋಣ.
4 8 1978: ಬದರಿಯಲ್ಲಿ ಯಾತ್ರಿಕರ ಸೌಕರ್ಯಕ್ಕಾಗಿ ಅನಂತಮಠ ವಸತಿ ಗೃಹದ ಉದ್ಘಾಟನೆ. ಇದೀಗ ಬದಲಿಯಲ್ಲಿ, ಊಟದ ವ್ಯವಸ್ಥೆ ಇರುವ ಅತ್ಯಂತ ಸುಸಜ್ಜಿತವಾದ ವಸತಿಗೃಹಗಳಲ್ಲೊಂದು.

1 5 1981: ಪೂರ್ಣಪ್ರಜ್ಞ ವಿದ್ಯಾಪೀಠದ ಸಂಭ್ರಮದ ರಜತೋತ್ಸವ. ಇದೀಗ ಪೂರ್ಣಪ್ರಜ್ಞ ವಿದ್ಯಾಪೀಠ ವೇದಾಂತ ಶಿಕ್ಷಣದ ರಂಗದಲ್ಲಿ ದೇಶದಲ್ಲೇ ಅಗ್ರಮಾನ್ಯ ಸಂಸ್ಥೆಯಾಗಿ ಬೆಳೆದುನಿಂತಿದೆ.

26 1 1982: ಅಖೀಲ ಭಾರತ ಮಾಧ್ವ ಮಹಾಮಂಡಲದ ವತಿಯಿಂದ, ಕರ್ಜಗಿ ಯಲ್ಲೊಂದು ವೃದ್ಧಾಶ್ರಮ-“ವಾನಪ್ರಸ್ಥಾಶ್ರಮ’ದ ಉದ್ಘಾಟನೆ.

1984 1986: ಜನವರಿ 18ರಿಂದ 1986 ಜನವರಿ 17ರ ತನಕ ಅದ್ದೂರಿಯ ಮೂರನೆಯ ಪರ್ಯಾಯ.

13 1 1985: ನಾಲ್ಕು ದಿನಗಳ ಕಾಲ ಉಡುಪಿಯಲ್ಲಿ ಶ್ರೀಕೃಷ್ಣ ಪ್ರತಿಷ್ಠಾ ಸಪ್ತಮ ಶತಮಾನೋತ್ಸವ.

7 12 1985: ಉಡುಪಿಯಲ್ಲಿ ಶ್ರೀಕೃಷ್ಣ ಸನ್ನಿಧಿಯಲ್ಲಿ ರಾಜಾಂಗಣದ ಪಕ್ಕದಲ್ಲಿ, ಯಾತ್ರಿಕರ ಸೌಕರ್ಯಕ್ಕಾಗಿ ವಸತಿಗೃಹ ಶ್ರೀಕೃಷ್ಣಧಾಮದ ಉದ್ಘಾಟನೆ.

1986: ಬಾಗಲಕೋಟೆಯ ಕುರುವಿನಕೊಪ್ಪದಲ್ಲಿ ಗೋಶಾಲೆ ಸ್ಥಾಪನೆ.

18 12 1988: ಬೆಂಗಳೂರಿನಲ್ಲಿ ಶ್ರೀಪಾದರ ಪೀಠಾರೋಹಣದ ಸುವರ್ಣ ಮಹೋತ್ಸವದ ಸಂಭ್ರಮ.

1989: ಬೆಂಗಳೂರಿನಲ್ಲಿ 750ನೆಯ ಮಧ್ವ ಜಯಂತೀ ಮಹೋತ್ಸವ.

27 10 1990: ಉತ್ತರಪ್ರದೇಶದ ಸರಹದ್ದಿನಲ್ಲಿ ಶ್ರೀರಾಮಜನ್ಮಭೂಮಿ ವಿಮುಕ್ತಿಗಾಗಿ ನಡೆದ ಆಂದೋಲನದಲ್ಲಿ ಭಾಗವಹಿಸಲೆಂದು ತೆರಳಿದ ಶ್ರೀಪಾದರಿಗೆ ಗೃಹಬಂಧನ. ಗೃಹಬಂಧನದಲ್ಲೂ ಸಾವಿರಾರು ಭಕ್ತರ ದರ್ಶನ. ಶ್ರೀಪಾದರ ಜನಪ್ರಿಯತೆಗೆ ಕಂಗಾಲಾದ ಸರಕಾರದಿಂದ ಬಿಡುಗಡೆಯ ಆದೇಶ. ಪೊಲೀಸರಿಂದ ಕ್ಷಮಾಯಾಚನೆ.

ಉಡುಪಿಯಲ್ಲಿ ಮಹಿಳೆಯರು ಮತ್ತಿತರರಿಗೆ ಸನ್ಯಾಸದೀಕ್ಷೆ ಕೊಡುತ್ತಿರಲಿಲ್ಲ. ಆದರೆ ಪೇಜಾವರ ಸ್ವಾಮೀಜಿಯವರು ಬೇರೆಯವರ ವಿರೋಧ ಎದುರಿಸಿಯೂ ನನಗೆ ದೀಕ್ಷೆ ಕೊಟ್ಟರು. ಸನ್ಯಾಸಕ್ಕೆ ಜಾತಿ ಲಿಂಗಗಳ ಭೇದ ಎಣಿಸಬಾರದು ಎಂಬ ದಿಟ್ಟ ನಿಲುವು ಅವರದು.
-ಉಮಾಭಾರತಿ,(ಉದಯವಾಣಿ, ಜನವರಿ 4, 1999)

ಸಮಾಜವಾದ, ಗಾಂಧೀವಾದ, ಹಿಂದುತ್ವವಾದ- ಇವು ಮೂರು ನಮ್ಮ ಮೇಲೆ ಪ್ರಭಾವ ಬೀರಿದ ಅಂಶಗಳು.
-ಶ್ರೀ ವಿಶ್ವೇಶ ತೀರ್ಥರು

Advertisement

Udayavani is now on Telegram. Click here to join our channel and stay updated with the latest news.

Next